ಮಾನ್ಯರೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಗಳು ಗೆದ್ದು, ಶಾಸಕರಾಗಿದ್ದಾರೆ. ಅಂದರೆ ಮತದಾರರು ನಂಬಿಕೆಯಿಟ್ಟು ಹಿಂದಿನ ಶಾಸಕರುಗಳನ್ನೇ ಆರಿಸಿದ್ದಾರೆ. ಹೀಗಾಗಿ ಈ ಶಾಸಕರುಗಳ ಜವಾಬ್ದಾರಿ ಕೂಡ ಹೆಚ್ಚಿದೆ. ನಮ್ಮ ನಾಪೋಕ್ಲುವಿಗೆ ರಸ್ತೆ, ನೀರಿನ ವ್ಯವಸ್ಥೆ, ಶಾಲಾ ಕಾಲೇಜಿನ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ರೈತರ ಸಮಸ್ಯೆಗಳು ಕಾಡು ಪ್ರಾಣಿಗಳ ಹಾವಳಿ, ಸದಾ ಕಾಡುತ್ತಿದೆ. 'ಮಡಿಕೇರಿ ಕ್ಷೇತ್ರದ ಶಾಸಕರು ಈ ನಾಲ್ಕುನಾಡಿಗೂ ಭೇಟಿ ಮಾಡಿ ಈ ಮೇಲಿನ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕಾಗಿದೆ. ಇಲ್ಲಿಯ ಸ್ಥಳೀಕರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು.

ಹಳ್ಳಿಯ ರೈತರು ಮೂಲೆ ಮೂಲೆಯಿಂದ ನಾಪೋಕ್ಲು ರೆವಿನ್ಯೂಗೆ ಅಥವಾ ಮಡಿಕೇರಿ, ಎಲ್ಲಿ ಹೋದರೂ ಕೈಬಿಸಿ ಮಾಡಿದರೆ ಮಾತ್ರ ಫೈಲು ಮುಂದೆ ಚಲಿಸುತ್ತದೆ. ಭ್ರಷ್ಟಾಚಾರ ಎಲ್ಲಾ ಹಂತದಲ್ಲೂ ಇದೆ. ಹಣ ಕೊಡದಿದ್ದರೆ ಫೈಲು ಹುಡುಕಬೇಕು. ಇನ್ನೊಮ್ಮೆ ಬನ್ನಿ ಬರುವ ವಾರ ಬನ್ನಿ..ಹಣ ಕೊಟ್ಟರೆ ಮಧ್ಯಾಹ್ನ ಬನ್ನಿ ಸಿಗುತ್ತೆ. ಈ ಒಂದು ಲಂಚಾವತಾರವನ್ನು ತಪ್ಪಿಸಬೇಕಾಗಿದೆ. ಜನರು ಕರೆಯುವದನ್ನು ಕಾಯದೇ ಭೇಟಿ ಕೊಡಬೇಕು. ಕಛೇರಿಗೆ ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ಕ್ರಮ ಜರುಗಿಸುವಂತಾಗಬೇಕು ಇಲ್ಲಿನ ವಿದ್ಯಾಸಂಸ್ಥೆಗಳಿಗೂ ಭೇಟಿ ನೀಡಬೇಕು. ಸರ್ಕಾರದ ಆದೇಶದಂತೆ ಆರ್.ಟಿ.ಇ. ಅಡಿಯಲ್ಲಿ ಹಿಂದುಳಿದ ಪರಿಶಿಷ್ಟ ವರ್ಗದ ಮಕ್ಕಳನ್ನು ತುಂಬುತ್ತಾರೆ. ಅವರಿಗೆ ಇಂತಿಷ್ಟು ಎಂದು ಸರ್ಕಾರ ನಿಗದಿ ಮಾಡಿದರೂ ಅರ್ಹ ಸಂಸ್ಥೆಗೆ ಕನಿಷ್ಟ ರೂಪದಲ್ಲಿ ಬರುತ್ತೆ. ಇದನ್ನು ಪರಿಹರಿಸಬೇಕು. ಕಾಡು ಪ್ರಾಣಿಗಳ ಹಾವಳಿ ಬಹುಷ ಇಡೀ ಜಿಲ್ಲೆಯ ಮೂಲೆ ಮೂಲೆಯಲ್ಲಿ ಹೆಚ್ಚಿದೆ. ಅವುಗಳು ಮನುಷ್ಯರನ್ನೂ ಕೊಲ್ಲುತ್ತಿರುತ್ತದೆ. ಹುಲಿಗಳು ರೈತರ ದನ ಕರುಗಳನ್ನು ಕೊಂದು ತಿನ್ನುತ್ತದೆ.

ನಾಪೋಕ್ಲು ಈಗ ವಾಹನಗಳ ದಟ್ಟಣೆ, ಸಣ್ಣ ರಸ್ತೆ, ಕಿಕ್ಕಿರಿದ ಜನರ ಓಡಾಟ. ಇಲ್ಲಿ ಯುವ ಸಮುದಾಯ ದ್ವಿಚಕ್ರ ವಾಹನ ಚಲಿಸುವ ಕ್ರಮ ನೋಡಿದರೆ ಭಯವಾಗುತ್ತದೆ. ಗರಿಷ್ಠ ವೇಗದಲ್ಲಿ ಓಡಿಸುತ್ತಾರೆ. ಪೊಲೀಸ್‍ರವರು ಇದರ ಬಗ್ಗೆ ನಿಗಾ ಇಡುವದು ಅತ್ಯವಶ್ಯಕ. ಮೂವರು ಕೆಲವೊಮ್ಮೆ ನಾಲ್ಕು ಜನ ಕೂಡಾ ಬೈಕ್ ಸವಾರಿ ಮಾಡುತ್ತಾರೆ. ಅದೂ ಕೂಡಾ ಹೆಲ್ಮೆಟ್ ಧರಿಸದೆ. ಯಾರೂ ಕೇಳುವವರಿಲ್ಲ ಎಂಬಂತಾಗಿದೆ. ಇಲ್ಲಿ ವೃದ್ಧರಿಗೆ ಮತ್ತು ಹೆಂಗಸರಿಗೆ ರಸ್ತೆ ದಾಟಲು ಭಯವಾಗುತ್ತಿದೆ. ಟ್ರಾಫಿಕ್ ಕಂಟ್ರೋಲ್ ಹೋಂಗಾರ್ಡ್ ಅದರಲ್ಲೂ ಮಹಿಳೆಯರನ್ನು ನೇಮಿಸಿದ್ದು ಅವರನ್ನು ಹೆಚ್ಚಿನವರು ಕ್ಯಾರೇ ಮಾಡುವುದಿಲ್ಲ. ಅವರ ಮಾತನ್ನು ಕೇಳುವದೇ ಇಲ್ಲ. ರಾಜ್ಯದಲ್ಲಿ ಆಳುವ ಪಕ್ಷ ಯಾವದೇ ಇದ್ದರೂ ಗೆದ್ದು ಬಂದ ಶಾಸಕರಿಗೆ ತಮ್ಮದೇ ಆದ ರಾಜಕೀಯ ಪ್ರಭಾವವಿರುತ್ತದೆ. ಮನಸ್ಸಿದ್ದರೆ ಜನಸೇವೆಗೆ ತೊಂದರೆ ಏನೂ ಇಲ್ಲ. ಈಗ ನಾನು ಒಬ್ಬ ಪ್ರಜೆಯಾಗಿ ನಮ್ಮ ಶಾಸಕರಿಂದ ಬಯಸುವುದೇನೆಂದರೆ ತಾವು ಪ್ರಪ್ರಥಮವಾಗಿ ನಿಷ್ಕಾಮ ಕರ್ಮ, ನಿಷ್ಪಕ್ಷಪಾತದಿಂದ ಎಲ್ಲಾ ವರ್ಗದ ಜನರೊಡನೆ ಸೌಹಾರ್ದ, ಸದ್ಭಾವನೆಯಿಂದ ಕಾರ್ಯ ತತ್ಪರರಾಗಬೇಕು. ತನ್ನ ಸ್ವಾಭಿಮಾನವನ್ನು ಕಾಪಾಡಿಕೊಂಡು ಜನಸೇವೆ ಮಾಡಿದಲ್ಲಿ ಬಹುಜನರ ಪ್ರೀತಿಗೆ ಪಾತ್ರರಾಗಬಹುದು. ಎಲ್ಲರನ್ನೂ ಸಮಾನವಾಗಿ ಕಂಡು ಕಷ್ಟ ಸುಖಗಳಲ್ಲಿ ಭಾಗಿಯಾದಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲೂ ಈಗಿರುವ ಶಾಸಕರೇ ಆರಿಸಿ ಬರುವುದರಲ್ಲಿ ಸಂದೇಹವಿಲ್ಲ.

-ಕೆ. ಎಂ. ಪೂಣಚ್ಚ, ಹಳೇ ತಾಲೂಕುಮಾನ್ಯರೆ, ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯು ಗಾತ್ರದಲ್ಲಿ ಕಿರಿದು ಹಾಗೂ ಜನಸಂಖ್ಯಾ ಸಾಂದ್ರತೆಯಲ್ಲಿ ಬಹಳ ಕಡಿಮೆಯಿರುವ ಜಿಲ್ಲೆಯಾಗಿದ್ದರೂ ಸಮಸ್ಯೆಗಳಲ್ಲಿ ಮಾತ್ರ ಈ ಜಿಲ್ಲೆಯು ಇತರ ಯಾವದೇ ಜಿಲ್ಲೆಗಳಿಗಿಂತ ಕಡಿಮೆಯಿಲ್ಲ ಎನ್ನಿಸಿದೆ. ಇದುವರೆಗೆ ನಮ್ಮ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯವೋ, ದೊಂಬಿ ದಾಂಧಲೆಗಳಿಂದ ದೂರವಿರುವ ಶಾಂತಸ್ವಭಾವದ ಜನರ ಮೀರಿದ ತಾಳ್ಮೆಯೋ ಏನೋ ಇಲ್ಲಿನ ಜನರ ಮೊರೆಯು ದೂರದ ನಗರಗಳಿಗೆ ತಲಪುವಷ್ಟು ಶಕ್ತಿಯನ್ನು ಪಡೆದಿಲ್ಲವೆನ್ನಬಹುದು. ಒಟ್ಟಿನಲ್ಲಿ ಕೊಡಗು ಜಿಲ್ಲೆಯು ತನ್ನದೇ ಆದ ಪರಿಹಾರ ಕಾಣದ ಹತ್ತು ಹಲವು ಸಮಸ್ಯೆಗಳಿಂದ ಜಡ್ಡುಗಟ್ಟಿಹೋಗಿದೆ. “ಶಕ್ತಿ”ಯ ಮೂಲಕ ಈ ಲೇಖನವು ಆಳುವ ಅರಸರಿಗೆ ತಲಪಿದ್ದೇ ಆದಲ್ಲಿ ಇಲ್ಲಿನ ಜ್ವಲಂತ ಸಮಸ್ಯೆಗಳು ಅವರ ಅರಿವಿಗೆ ಬಂದು ಕೆಲವು ಮಟ್ಟಿ ಗಾದರೂ ಕೊಡಗಿನ ಅರಣ್ಯ ರೋದನಕ್ಕೆ ಪ್ರತಿಫಲವು ದೊರೆಯ ಬಹುದು ಎಂಬ ಆಶಯವಿದೆ.

ಕಂದಾಯ ಇಲಾಖೆಯು ರೈತಾಪಿ ವರ್ಗದವರ ಬದುಕನ್ನು ಹಿಂಡಿ ಹಿಪ್ಪೆಯಾಗಿಸುತ್ತಿದೆ. ಕೊಡಗಿನಲ್ಲಿ ಹೆಚ್ಚಿನ ರೈತರು ಸಣ್ಣ ಹಿಡುವಳಿದಾರರಾಗಿದ್ದು ಅವರ ಸ್ವಂತ ಕೃಷಿ ಜಮೀನು, ಕಾಫಿ ತೋಟಗಳಿಗೆ ಖಾತೆ ಮಾಡಿಸಿಟ್ಟುಕೊಳ್ಳುವದು ಅಸಾಧ್ಯವಾಗಿದೆ. ಈ ಹಿಂದೆ ಕುಟುಂಬದ ಹಿರಿಯನು “ಪಟ್ಟೆದಾರ”ನಾಗಿದ್ದು ಕೃಷಿಯ ಎಲ್ಲ ಜಮೀನೂ ಆತನ ಹೆಸರಿನಲ್ಲಿ ಇರುತ್ತಿತ್ತು. ಆದರೀಗ ಆತನ ಮರಣಾನಂತರ ಪಟ್ಟೆದಾರರ ಕುಟುಂಬದವರು ತಮ್ಮ ಹಿಸ್ಸೆಗೆ ಬಂದ ಜಮೀನಿಗೆ ಖಾತೆ ವರ್ಗಾವಣೆ ಮಾಡಿಸಿಕೊಳ್ಳಲಾಗದೆ ಬವಣೆ ಪಡುತ್ತಿದ್ದಾರೆ. ತಮ್ಮ ಹಿಡಿತದಲ್ಲಿ ಜಮೀನಿದ್ದರೂ ಅದಕ್ಕೆ ಸೂಕ್ತ ಖಾತೆ ತೆರೆಯಲಾಗದೆ ಬಡ ರೈತರು ಬ್ಯಾಂಕ್‍ನಿಂದ ಯಾವದೇ ಸೌಲಭ್ಯಗಳನ್ನು ಪಡೆಯುವದಾಗಲೀ ಅಥವಾ ಸರಕಾರವು ನೀಡುವ ಸೌಲಭ್ಯಗಳನ್ನು ಪಡೆಯುವದಾಗಲೀ ಅಥವಾ ಕನಿಷ್ಟ ತಮ್ಮ ಕೃಷಿಗೆ ಫಸಲುವಿಮೆ ಮಾಡಿಸುವದಾಗಲೀ ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಹೀಗಾಗಿ ಕಂದಾಯ ಇಲಾಖೆಯಲ್ಲಿ ಅಂತಹ ಅರ್ಜಿದಾರರು ಅರ್ಜಿ ಸಲ್ಲಿಸಿದ ಮೂರು ತಿಂಗಳಿನ ಒಳಗಾಗಿ ಅವರ ಜಮೀನಿಗೆ ಸೂಕ್ತ ಖಾತೆಯನ್ನು ತೆರೆದುಕೊಡ ಬೇಕಾಗಿದೆ.

ಕೃಷಿಕರು ತಮ್ಮ ಕೃಷಿಭೂಮಿ ಯಲ್ಲಿಯೇ ಮನೆ ನಿರ್ಮಿಸಿಕೊಂಡು ತಮ್ಮ ಜಮೀನಿನ ನಿರ್ವಹಣೆ ಮಾಡಲಿಚ್ಛಿಸುತ್ತಾರೆ. ಆದರೆ, ಇಂತಹ ಕೃಷಿಕರಿಗೆ ಗರಿಷ್ಠ 5 ಸೆಂಟ್‍ನಷ್ಟು ಮನೆ ನಿರ್ಮಾಣ ಮಾಡಲು ಇಲ್ಲ-ಸಲ್ಲದ ದಾಖಲೆ ಗಳನ್ನು ಕೇಳಲಾಗುತ್ತದೆ. ಇಂತಹ ದಾಖಲೆಗಳನ್ನು ಒದಗಿಸಲಾಗದಿದ್ದರೆ ವಿದ್ಯುತ್ ಸೌಕಂiÀರ್i, ನೀರಿನ ಅನುಕೂಲತೆ ಇವುಗಳನ್ನು ಪಡೆಯಲು ಸಾಧ್ಯವಾಗದು. ಆದುದರಿಂದ ಹಳ್ಳಿಗರಿಗೆ ತಮ್ಮ ವಾಸಕ್ಕಾಗಿ ಅನಗತ್ಯ ದಾಖಲೆಗಳನ್ನು ಕೇಳದೆ ಮನೆ ಕಟ್ಟಿಕೊಳ್ಳಲು ಅವಕಾಶವನ್ನು ನೀಡಬೇಕು.

ಕೊಡಗಿನಲ್ಲಿ ಮಳೆ ಜಾಸ್ತಿ ಇದ್ದು ಇಲ್ಲಿನ ರಸ್ತೆಗಳು ಬಹುಬೇಗ ಹದಗೆಡುತ್ತವೆ. ಅಧಿಕ ತಿರುವುಗಳು ಮತ್ತು ಮೇಡುಗಳಿಂದ ಕೂಡಿದ ಕೊಡಗಿನ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದಲ್ಲಿ, ಆಗುವ ಅಪಘಾತಗಳನ್ನು ಕಡಿಮೆ ಮಾಡಬಹುದಲ್ಲದೆ, ಸಂಚಾರವ್ಯವಸ್ಥೆಯೂ ಸುಗಮವಾಗುತ್ತದೆ. ಬೋಯಿಕೇರಿಯ ತಿರುವೊಂದು ಪ್ರತಿ ತಿಂಗಳೂ ಕನಿಷ್ಟ ಎರಡು ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ಹಾಗೆಯೇ ಜೋಡುಪಾಲದ ಕೆಲವು ಅವೈಜ್ಞಾನಿಕವಾಗಿ ನಿರ್ಮಿಸಿದ ತಿರುವುಗಳೂ ಅಪಘಾತದ ತಿರುವುಗಳು ಎನ್ನುವ ಕುಖ್ಯಾತಿಯ ಹೆಸರು ಪಡೆದಿವೆ.ಇಂತಹ ಅಪಘಾತಕ್ಕೆ ಕಾರಣವಾಗುವ ತಿರುವುಗಳನ್ನು ಆದಷ್ಟು ಬೇಗ ಸರಿಪಡಿಸಬೇಕಾಗಿದೆ.

ತಾಲೂಕು ರಚನೆಯಾಗಲಿ : ಕೊಡಗಿನ ತಾಲೂಕುಗಳ ರಚನೆಯೂ ತೀರ ಅವೈಜ್ಞಾನಿಕವಾದುದಾಗಿದೆ. ಮಡಿಕೇರಿಯಿಂದ ಕೇವಲ 15 ಕಿಲೋ ಮೀಟರ್ ದೂರದ ಚೆಟ್ಟಳ್ಳಿಯನ್ನು ಸೋಮವಾರಪೇಟೆ ತಾಲೂಕಿಗೆ ಸೇರಿಸಿರುವದು ಸರಿಯಲ್ಲ. ಎಲ್ಲ ಸರಕಾರೀ ವ್ಯವಹಾರಗಳಿಗೂ ಇಲ್ಲಿನ ಜನರು 34 ಕಿಲೋ ಮೀಟರ್ ದೂರದ ಸೋಮವಾರಪೇಟೆಗೆ ಹೋಗುವ ಅನಿವಾರ್ಯತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಕುಶಾಲನಗರ ಮತ್ತು ಪೊನ್ನಂಪೇಟೆಯೆಂಬ ಎರಡು ಹೊಸ ತಾಲೂಕುಗಳನ್ನು ರಚಿಸಿ, ಇಲ್ಲಿನ ಪೇಟೆಗಳನ್ನು ಸಮೀಪದ ತಾಲೂಕುಗಳಿಗೆ ವರ್ಗಾಯಿಸುವ ಅಗತ್ಯವಿದೆ.

ಕಾಡಾನೆ ಹಾವಳಿ : ಕೊಡಗಿನಲ್ಲಿ ಕಾಡಾನೆಗಳ ಹಾವಳಿಯಿಂದ ಕೇವಲ ಬತ್ತದ ಗದ್ದೆ, ಬಾಳೆತೋಟಗಳು ಮತ್ತು ಇತರ ಕೃಷಿಭೂಮಿಯ ಉತ್ಪನ್ನಗಳು ಮಾತ್ರವಲ್ಲ, ಹಲವಾರು ಜೀವಗಳೂ ಕಳೆದ ಮೂವತ್ತು ವರ್ಷಗಳಿಂದ ಆವ್ಯಾಹತವಾಗಿ ಕಳೆದುಹೋಗುತ್ತಿವೆ. ವರ್ಷಕ್ಕೆ ನಲ್ವತ್ತಕ್ಕೂ ಹೆಚ್ಚು ಜೀವಹಾನಿಗಳಾಗಿದ್ದು, ತಜ್ಞರು ಚಿಂತನೆಯನ್ನು ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ವಿದ್ಯುತ್ ಸಮಸ್ಯೆ : ಕೊಡಗಿನಲ್ಲಿ ವಿದ್ಯುತ್ ಸಮಸ್ಯೆಯು ಅಂತರ್ ಪಿಶಾಚಿಯಂತೆ ಜನರನ್ನು ವರ್ಷವಿಡೀ ಕಾಡುತ್ತಿದೆ. ವಿದ್ಯುತ್ ವ್ಯತ್ಯಯಗೊಳ್ಳಲಿದೆ ಎಂದು ಪತ್ರಿಕೆಗಳ ಮೂಲಕ ತಿಳಿಸುವದರ ಜೊತೆಗೆ ಯಾವದೇ ಕಾರಣಗಳನ್ನೂ ಕೊಡದೆ ವಿದ್ಯುತ್‍ನ ಕಣ್ಣಾಮುಚ್ಚಾಲೆ ಆಟವಾಡಲಾಗುತ್ತದೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಮೂರು ನಾಲ್ಕು ಬಾರಿ ವಿದ್ಯುತ್ ಅನ್ನು ತೆಗೆದು ಪುನಃ ಕೊಡಲಾಗುತ್ತದೆ. ಇದರಿಂದಾಗಿ ವಿದ್ಯುತ್ ಆಧಾರಿತ ಕೆಲಸಗಳಲ್ಲಿ ತೀವ್ರ ತೊಂದರೆಯಾಗುವದಲ್ಲದೆ ಅಧಿಕ ವಿದ್ಯುತ್ ಬಳಕೆಗೂ ಕಾರಣವಾಗುತ್ತದೆ. ಇದರೊಂದಿಗೆ ತೀರಾ ಕಳಪೆ ಗುಣಮಟ್ಟದ ವಿದ್ಯುತ್(ಕಡಿಮ ವೋಲ್ಟೇಜಿನ ವಿದ್ಯುತ್, ಸಿಂಗಲ್ ಫೇಸ್) ಇವೂ ತಮ್ಮ ಛಾಪನ್ನು ಬಳಕೆದಾರನ ಮೇಲೆ ಮೂಡಿಸಿ ಅವನನ್ನು ಹಲವು ಆತಂಕಗಳಿಂದ ಕಾಡುತ್ತಿವೆ.

ಪಾರ್ಕಿಂಗ್ ಅವ್ಯವಸ್ಥೆ : ಜನಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ ಬದುಕಿನ ಗುಣಮಟ್ಟವೂ ಹೆಚ್ಚುತ್ತಿರುವಾಗ ವಾಹನಗಳ ಸಂಖ್ಯೆಯೂ ಹೆಚ್ಚಾಗುವದು ಸಹಜವಾಗಿದೆ. ಕೊಡಗಿನಲ್ಲೂ ವರ್ಷದಿಂದ ವರ್ಷಕ್ಕೆ ವಾಹನಗಳು ದಟ್ಟವಾಗುತ್ತಿವೆ. ಈ ಹೆಚ್ಚಳವು ವಾಹನ ನಿಲುಗಡೆಯ ಕಾಠಿಣ್ಯವನ್ನು ಹೆಚ್ಚಿಸಿವೆ. ಅದರೊಂದಿಗೆ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆಯೂ ತೀರಾ ಹದಗೆಟ್ಟಿದೆ. ಪೇಟೆಗಳಲ್ಲಿ ದ್ವಿಚಕ್ರವಾಹನಕ್ಕೆ ಹಾಗೂ ನಾಲ್ಕು ಚಕ್ರದ ವಾಹನಕ್ಕೆ ಪ್ರತ್ಯೇಕ ಸ್ಥಳಗಳಲ್ಲಿ ನಿಲುಗಡೆಯ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ವಾಹನಗಳನ್ನು ಒಂದೇ ದಿಕ್ಕಿನಲ್ಲಿ ನಿಲುಗಡೆಗೊಳಿಸುವದು ಮಾಡಿದರೆ ಹೆಚ್ಚು ವಾಹನಗಳನ್ನು ನಿಲುಗಡೆ ಗೊಳಿಸಬಹುದು. ಇದರೊಂದಿಗೆ ವರ್ತಕರಿಂದ ತಮ್ಮ ಅಂಗಡಿಮುಂಗಟ್ಟುಗಳ ಎದುರಿನಲ್ಲಿ ಫಲಕಗಳನ್ನು ಇರಿಸುವುದು, ಸರಪಳಿ ಬಿಗಿಯುವದು,ರಸ್ತೆಯವರೆಗೂ ಅಂಗಡಿಯ ವಿಸ್ತರಣೆ ಇವು ನಿಲುಗಡೆ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸುತ್ತವೆ. ಪೂಜಾ ಮಂದಿರಗಳ ಎದುರು ಕಬ್ಬಿಣದ ಪಟ್ಟಿಗಳನ್ನು ಇರಿಸುವದು, ಹಗಲು ಹೊತ್ತಿನಲ್ಲಿಯೇ ದೊಡ್ಡ ಲಾರಿಗಳಲ್ಲಿ ಸಾಮಾನುಗಳನ್ನು ತಂದು ಗಂಟೆಗಟ್ಟಲೆ ಅವುಗಳನ್ನು ಇಳಿಸುವದು, ಏರಿಸುವದು ಮಾಡುವದು, ತರಕಾರಿ ಅಂಗಡಿಗಳ ಟೆಂಪೋಗಳನ್ನು ರಸ್ತೆಯ ಬದಿಯಲ್ಲಿರಿಸಿ ವ್ಯಾಪಾರ ಮಾಡುವದು ಇವೆಲ್ಲವೂ ವಾಹನ ಮಾಲೀಕರಿಗೆ ನಿಲುಗಡೆಯ ವಿಷಯದಲ್ಲಿ ಸಿಂಹ ಸ್ವಪ್ನಗಳಾಗುತ್ತವೆ. ಮೂರ್ನಾಡು ಪಟ್ಟಣ ಈ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ. ಹೋಮ್ ಗಾರ್ಡ್‍ಗಳನ್ನು ನಿಯೋಜಿಸಿದ್ದರೂ ಯಾವದೇ ವರ್ತಕರೂ ಇವರನ್ನು ಗಂಭೀರವಾಗಿ ಪರಿಗಣಿಸುವದಿಲ್ಲ. ನಮ್ಮ ಚುನಾಯಿತ ಪ್ರತಿನಿಧಿಗಳು ವಾಹನ ನಿಲುಗಡೆಯ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಲ್ಲಿ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಟವರ್‍ಗಳ ಕೊರತೆ : ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಡಿಜಿಟಲ್ ವ್ಯವಸ್ತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಗದುರಹಿತ ವ್ಯವಹಾರ, ವಾಟ್ಸ್‍ಅಪ್ ಮೂಲಕ ಸಂದೇಶ ರವಾನೆ, ಡಿಡಿಲಾಕರ್ ಇವುಗಳು ಸಮಯ ಹಾಗೂ ಹಣವನ್ನು ಉಳಿಸುತ್ತವೆ. ಆದರೆ ಕೊಡಗಿನಲ್ಲಿ ಸಂಪರ್ಕ ಟವರ್‍ಗಳ ಕೊರತೆ, ಅವುಗಳ ಕಳಪೆ ಕಾರ್ಯಕ್ಷಮತೆ ಜನರ ಬದುಕನ್ನು ಹೈರಾಣವಾಗಿಸಿವೆ. ಈಗಲೂ ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಈ ಡಿಜಿಟಲ್ ಕೆಲಸಗಳಿಗೆ ಪೇಟೆಗಳಿಗೆ ಹೋಗುವದೋ ಅಥವಾ ಯಾವುದಾದರೂ ಗುಡ್ಡವನ್ನು ಹತ್ತಿನಿಲ್ಲುವುದೋ ಮಾಡಬೇಕಾಗುತ್ತದೆ. ಕೊಡಗಿನ ಗ್ರಾಮೀಣ ಭಾಗಗಳಲ್ಲೂ ಟವರ್‍ಗಳನ್ನು ಅಳವಡಿಸಿ ಕೊಡಗಿನ ಕನಿಷ್ಟ 80 ಪ್ರತಿಶತಭಾಗದವರಿಗಾದರೂ ಡಿಜಿಟಲ್ ತಂತ್ರಜ್ಞಾನದ ಲಾಭಪಡೆಯುವ ಅವಕಾಶವನ್ನು ನಮ್ಮ ಚುನಾಯಿತ ಪ್ರತಿನಿಧಿಗಳು ಮಾಡಬೇಕಾಗಿದೆ.

ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣವಾದ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರು ಎಂದರೆ ಚಲಿಸುವ ಖಜಾನೆಗಳು ಎನ್ನುವ ಭಾವವು ಜಿಲ್ಲಾಡಳಿತದಲ್ಲಿ ಮೂಡಿದಂತಿದೆ. ಪ್ರವಾಸಿಗರು ಬಂದೊಡನೆಯೆ ಅವರ ವಾಹನಗಳನ್ನು ನಿಲ್ಲಿಸುವದಕ್ಕೆ ಅತಿ ಹೆಚ್ಚಿನ “ನಿಲುಗಡೆ ಶುಲ್ಕ”ವನ್ನು ಸ್ಥಳೀಯ ಆಡಳಿತ ಗುತ್ತಿಗೆದಾರರಿಂದ ವಸೂಲಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಭಾಗಮಂಡಲ, ತಲಕಾವೇರಿ, ಅಬ್ಬಿಫಾಲ್ಸ್, ಇರ್ಪು ಜಲಪಾತ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಂದ ಹಣಸುಲಿಗೆ ಮಾಡಲಾಗುತ್ತದೆ. ಈ ಹಿಂದೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಹತ್ತುವದಕ್ಕೂ ಶುಲ್ಕ ವಿಧಿಸಲಾಗುತ್ತಿತ್ತು. ಈಗಾಗಲೇ ರೋಡ್ ಟೇಕ್ಸ್ ಎಂದು ಸರಕಾರಕ್ಕೆ ಶುಲ್ಕ ನೀಡಿದ ಮೇಲೆ ಪುನಃ ವಾಹನ ನಿಲುಗಡೆಗೆ ಹಣ ಸೆಳೆಯುವದಾದರೂ ಏಕೆ ? ನಮ್ಮ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆಯೂ ದೃಷ್ಠಿ ಹರಿಸಬೇಕಾಗಿದೆ.

ಆಸ್ಪತ್ರೆಗಳಲ್ಲಿ ಹಣ ಸುಲಿಗೆ : ಸರಕಾರಿ ಆಸ್ಪತ್ರೆಗಳಿದ್ದರೂ ಅಲ್ಲಿ ಚಿಕಿತ್ಸೆಗೆ ವೈದ್ಯರಿಲ್ಲದಿರುವದು, ವೈದ್ಯರಿದ್ದರೂ ಔಷಧಿಗಳೇ ಕಾಣೆಯಾಗಿರುವದು, ಹೆಣದ ಪೋಸ್ಟ್ ಮಾರ್ಟಮ್ ಆದಮೇಲೆ ಆ ಹೆಣವನ್ನು ವಾರಿಸುದಾರರು ಪಡೆಯಲೂ ಹಣತೆರಬೇಕಾಗುವದು, ಸರಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಮಕ್ಕಳ ದರ್ಶನವಾಗಬೇಕಾದರೂ ಹಣ ನೀಡಬೇಕಾಗುವದು ಇವು ನಮ್ಮ ಕೊಡಗಿನ ವೈದ್ಯಕೀಯ ಲೋಕದ ಚಿತ್ರಣವಾಗಿದೆ. ವೀರಾಜಪೇಟೆ, ಸೋಮವಾರಪೇಟೆಗಳಲ್ಲಿ ಅಗ್ನಿಶಾಮಕ ದಳದ ವ್ಯವಸ್ತೆಯ ಅಗತ್ಯವನ್ನು ನಮ್ಮ ಶಾಸಕರು ಗಮನಿಸಬೇಕು.

ಈ ಮೇಲಿನವು ಕೊಡಗಿನ ಸಮಸ್ಯೆಗಳ ಕೆಲವು ಮಾದರಿಗಳಷ್ಟೇ ಹೊರತು ಸಮಸ್ಯೆಗಳು ಅಷ್ಟಕ್ಕೇ ಸೀಮಿತಗೊಂಡಿಲ್ಲ. ನಮ್ಮ ಚುನಾಯಿತ ಪ್ರತಿನಿಧಿಗಳು ಸಮಸ್ಯೆಗಳತ್ತ ತಮ್ಮ ಕಳವಳವನ್ನು ವ್ಯಕ್ತಪಡಿಸಿದಲ್ಲಿ, ತಮ್ಮ ಸಹಾನುಭೂತಿಯನ್ನು ತೋರಿದಲ್ಲಿ ಅವು ಪ್ರಯೋಜನಕ್ಕೆ ಬಾರವು. ಪ್ರತಿನಿಧಿಗಳು ಕೇವಲ ಕಾಮಗಾರಿಗಳ ಉದ್ಘಾಟನೆಗಷ್ಟೇ ಸೀಮಿತಗೊಳ್ಳದೆ ಸಮಸ್ಯೆಗಳ ತೀವ್ರತೆಯ ಆಧಾರದ ಮೇಲೆ ಪರಿಹಾರಕ್ಕೆ ಪ್ರಯತ್ನಿಸಿದಲ್ಲಿ ಕೊಡಗು ನಿಜಕ್ಕೂ “ಭೂರಮೆಯು ಅರಸಿಬಂದ ದೇವಸನ್ನಿಧಿ”ಯಷ್ಟು ಶ್ರೇಷ್ಠವೆನಿಸೀತು, ಇಲ್ಲಿನ ನಿವಾಸಿಗಳ ಸ್ವರ್ಗವೂ ಆಗಬಹುದು.

-ಕಿಗ್ಗಾಲು ಎಸ್ ಗಿರೀಶ್, ಮೂರ್ನಾಡು

ಚಿಕ್ಲಿಹೊಳೆ ರಸ್ತೆ ಅವ್ಯವಸ್ಥೆ

ಮಾನ್ಯರೆ, ಕೊಡಗರಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ಜಲಾಶಯ ಮುಖಾಂತರ ಕುಶಾಲನಗರ - ಸಿದ್ದಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ 12 ಕಿ.ಮೀ. ರಸ್ತೆಯು ನೀರಾವರಿ ಇಲಾಖೆಯ ಸುಪರ್ದಿಯಲ್ಲಿ ಇದ್ದು, ಹಲವಾರು ವರ್ಷಗಳಿಂದ ಇದು ಬಹಳ ದುಸ್ಥಿತಿಯಲ್ಲಿದೆ. ಈ ರಸ್ತೆಯ ಮುಖಾಂತರ ಪ್ರತಿದಿನ ನೂರಾರು ಶಾಲಾ ಮಕ್ಕಳು, ಶಾಲಾ ವಾಹನಗಳು, ನೂರಾರು ಸಾರ್ವಜನಿಕರು, ದೂರದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಚಿಕ್ಲಿಹೊಳೆ ಜಲಾಶಯ ಮತ್ತು ದುಬಾರೆ ಆನೆ ಶಿಬಿರಕ್ಕೆ ತೆರಳುವ ಸಾವಿರಾರು ಪ್ರವಾಸಿ ವಾಹನಗಳು ಈ ರಸ್ತೆ ಮೂಲಕ ತೆರಳುತ್ತಾರೆ. ಕಳೆದ ವರ್ಷ ಕೆಲವು ಆಯ್ದ ಸ್ಥಳಗಳಲ್ಲಿ ರಸ್ತೆ ದುರಸ್ತಿ ಮಾಡಿದ್ದು, ಉಳಿದಂತೆ ತೀರಾ ಹದಗೆಟ್ಟಿದೆ. ಆದ್ದರಿಂದ ವಾಹನ ಮಾಲೀಕರು, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಈ ರಸ್ತೆಯನ್ನು ಸರಿಪಡಿಸಿ ಸಂಚಾರಕ್ಕೆ ಯೋಗ್ಯಗೊಳಿಸಬೇಕಾಗಿ ವಿನಂತಿ.

- ಪರ್ಲಕೋಟಿ ಎಸ್. ಮೋಹನ್, ರಂಗಸಮುದ್ರ.

ನಮ್ಮೂರ ಸಮಸ್ಯೆ ಬಗೆಹರಿಸಿ

ಮಾನ್ಯರೆ, ಕುಶಾಲನಗರ ಶೀಘ್ರವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಭವಿಷ್ಯದಲ್ಲಿ ನಗರಸಭೆಯ ಸ್ಥಾನಕ್ಕೆ ಅರ್ಹವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಸಾಕಷ್ಟು ಬಡಾವಣೆಗಳು ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ ಗ್ರಾಮದಲ್ಲಿವೆ. ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು. ಈ ಬಾರಿ ಬೇಸಿಗೆಯ ಕಾಲದಲ್ಲಿ ಕಾವೇರಿ ನದಿ ಬತ್ತಿಹೋದ ಕಾರಣ ಕುಶಾಲನಗರ ವ್ಯಾಪ್ತಿಯ ಜನರು ನೀರಿಗಾಗಿ ಹಾಹಾಕಾರ ಪಟ್ಟಿದ್ದಾರೆ. ಆದುದರಿಂದ ಸರಕಾರದ ಮಟ್ಟದಲ್ಲಿ ಚರ್ಚಿಸಿ ಹಾರಂಗಿ ಜಲಾಶಯದಿಂದ ಕುಶಾಲನಗರ ಪಟ್ಟಣ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮಗಳಿಗೆ ನಿತ್ಯವೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಕುಶಾಲನಗರ ಸಮೀಪವಿರುವ ಬಸವನಹಳ್ಳಿ ಗ್ರಾಮದ ಬಳಿ ರಸ್ತೆ ಸಾರಿಗೆ ವತಿಯಿಂದ ಘಟಕ ನಿರ್ಮಿಸಲು 4 ಎಕರೆ ಜಾಗವನ್ನು ಮೀಸಲು ಇರಿಸಲಾಗಿದೆ. ನೆನೆಗುದಿಗೆ ಬಿದ್ದಿರುವ ಈ ರಸ್ತೆ ಸಾರಿಗೆಯ ಘಟಕ ಹಾಗೂ ಕವಚ (ಬಾಡಿ ಬಿಲ್ಡ್) ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕಿದೆ. ಘಟಕ ನಿರ್ಮಾಣವಾದರೆ ಕುಶಾಲನಗರ ಪಟ್ಟಣದಿಂದ ರಾಜ್ಯದ ಎಲ್ಲಾ ಪ್ರದೇಶಕ್ಕೆ ಬಸ್‍ನ ಸಂಪರ್ಕ ಸಾಧ್ಯವಾಗಲಿದೆ.

ಬಸ್ ನಿಲ್ದಾಣ ನಿರ್ಮಾಣ

ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಎನ್‍ಹೆಚ್ 275 ರ ಮೂಲಕ ಹಾದು ಹೋಗುತ್ತದೆ. ದಿನಂಪ್ರತಿ ನಿಲ್ದಾಣಕ್ಕೆ 600 ಮಾರ್ಗಸೂಚಿಗಳಲ್ಲಿ ರಾಜ್ಯದ ವಿವಿಧ ಪ್ರದೇಶಕ್ಕೆ ಬಸ್‍ಗಳು ಹಾದು ಹೋಗುತ್ತವೆ ಹಾಗೂ ರಾತ್ರಿ ವೇಳೆಯಲ್ಲಿ 20 ಕ್ಕಿಂತ ಹೆಚ್ಚು ಬಸ್‍ಗಳು ನಿಲ್ದಾಣದಲ್ಲಿ ತಂಗುತ್ತವೆ. ಕುಶಾಲನಗರದ 30 ವರ್ಷಗಳಷ್ಟು ಹಳೆಯದಾದ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಬೇಕಾಗಿದೆ.

ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ

ದಿನಂಪ್ರತಿ ಹೆದ್ದಾರಿ ವ್ಯಾಪ್ತಿಯಲ್ಲಿ ವಾಹನ ಅಪಘಾತ ಸಂಭವಿಸುತ್ತಿರುತ್ತದೆ. ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಆದ ಕಾರಣ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕಾಗಿದೆ ಹಾಗೂ ಆರೋಗ್ಯ ಕೇಂದ್ರಕ್ಕೆ ನುರಿತ ತಜ್ಞ ವೈದ್ಯರನ್ನು ನೇಮಿಸಬೇಕಾಗಿದೆ. ಆರೋಗ್ಯ ಕೇಂದ್ರಕ್ಕೆ ಡಯಾಲಿಸೀಸ್ ಕೇಂದ್ರ ಮತ್ತು ಐಸಿಯು ಕೇಂದ್ರವನ್ನು ಮಂಜೂರು ಮಾಡಿಸಬೇಕಾಗಿದೆ.

ಕುಶಾಲನಗರಕ್ಕೆ ಒಳಚರಂಡಿ ಮಂಜೂರಾಗಿ 6 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆ ಪೂರ್ಣಗೊಳ್ಳದ ಕಾರಣ ನಗರದ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ನಗರ ಸಾರಿಗೆ ಬಸ್ ವ್ಯವಸ್ಥೆ ಆಗಿದ್ದು, ಕೊಡಗು ಜಿಲ್ಲೆಗೆ ಮಂಜೂರು ಆಗಿದ್ದರೂ ಕಾರ್ಯರೂಪಕ್ಕೆ ಬಂದಿರುವದಿಲ್ಲ. ಈ ಬಗ್ಗೆ ಗಮನಹರಿಸಬೇಕಾಗಿದೆ.

ಕುಶಾಲನಗರ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ, ಕಲಾಭವನ, ಮಾರುಕಟ್ಟೆ ಕಾಮಗಾರಿ ಸಾಕಷ್ಟು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಒಟ್ಟಿನಲ್ಲಿ ಕುಶಾಲನಗರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕಾಗಿದೆ. - ಜಿ. ಶ್ರೀಹರ್ಷ, ಕುಶಾಲನಗರ.

ಸಮಸ್ಯೆಗಳ ಆಗರ ಮಾಲ್ದಾರೆ

ಮಾನ್ಯರೆ, ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ಹಲವಾರು ಸಾರ್ವಜನಿಕ ಸಮಸ್ಯೆಗಳಿಂದ ಕೂಡಿದೆ. ಮೊದಲನೆಯದಾಗಿ ಮಾಲ್ದಾರೆ ಗ್ರಾಮ