ಮಡಿಕೇರಿ, ಜೂ. 4: ಒಂದೊಮ್ಮೆ ಮಡಿಕೇರಿಯನ್ನು ರಾಜಧಾನಿಯಾಗಿ ಇರಿಸಿಕೊಂಡು ಕೊಡಗನ್ನು ಆಳಿದ ರಾಜ ಪರಂಪರೆಯ ಮಡಿಕೇರಿ ಕೋಟೆಯ ಅರಮನೆಯ ಒಂದೊಂದೇ ಮಾಡು ಕಳಚಿಕೊಳ್ಳ ತೊಡಗಿದೆ. ಈ ಬಗ್ಗೆ ಕೇಂದ್ರ ಪ್ರಾಚ್ಯ ವಸ್ತು ಇಲಾಖೆ ಯಾಗಲೀ, ಯಾವ ಸರಕಾರ ಅಥವಾ ಆಡಳಿತ ವ್ಯವಸ್ಥೆ ತಲೆಕೆಡಿಸಿ ಕೊಂಡಂತಿಲ್ಲ. ಈ ನಡುವೆ ಮತ್ತಷ್ಟು ಅಚ್ಚರಿಯ ಸಂಗತಿಯೆಂದರೆ ಈ ರಾಜಪರಂಪರೆಗೆ ಸಾಕ್ಷಿ ಯಾಗಿರುವ ಗದ್ದುಗೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದೆ ಒಂದು ದಶಕ ಕಳೆದು ಹೋಗಿದೆಯಂತೆ.!ಒಂದೊಮ್ಮೆ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಸಹಿತ ಕೊಡಗಿನ ಆರು ದೇವನೆಲೆಗಳೊಂದಿಗೆ ಗದ್ದುಗೆಯ ರುದ್ರಮುನಿ ಗುರುಗಳ ನೆಲೆಯೂ ನಿತ್ಯಪೂಜೆಗೆ ಒಳಪಟ್ಟಿತ್ತು. ಆರೆಂಟು ವರ್ಷಗಳ ಹಿಂದಿನ ತನಕ ಗದ್ದುಗೆಯಲ್ಲಿ ನಿತ್ಯ ಪೂಜೆ ಸಾಗಿ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಅರ್ಚಕರಾಗಿದ್ದ ವ್ಯಕ್ತಿ ಅಸುನೀಗಿದ್ದರು.
ಆ ಬಳಿಕ ಶಾಶ್ವತವಾಗಿ ರಾಜ ಗದ್ದುಗೆಯ ಗುರು ಸ್ಥಾನಕ್ಕೆ ಪೂಜೆ ಯೊಂದಿಗೆ ದೀಪ ಹೊತ್ತಿಸುವವರೂ ಇಲ್ಲದೆ ಬಣ ಗುಟ್ಟುತ್ತಿದೆ. ಈ ನಡುವೆ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ಬಿಲ್ ಪಾವತಿಸದೆ ಬೆಳಕು ಇಲ್ಲವಂತೆ. ಚೆಸ್ಕಾಂನಿಂದ ಸಂಪರ್ಕ ಕಡಿತಗೊಳಿಸಿ ದಶಕವೇ ಕಳೆದು ಹೋಗಿದೆ.
ಇನ್ನು ಹಿಂದಿನ ಮೂಡಾ ಅಧ್ಯಕ್ಷರಾಗಿದ್ದ ಶಜಿಲ್ ಕೃಷ್ಣ ಅಧಿಕಾರದ ಅವಧಿಯಲ್ಲಿ ಗದ್ದುಗೆ ಆವರಣದಲ್ಲಿ ಸುರಕ್ಷಿತ ತಡೆ ಬೇಲಿಯೊಂದಿಗೆ ಪುಟಾಣಿಗಳಿಗೆ ಆಟದ ಉದ್ಯಾನ, ಹೂದೋಟ, ಬೆಳಕಿನ ದೀಪಗಳ ಸಹಿತ ಪ್ರವಾಸಿಗರ ಆಕರ್ಷಣೀಯ ತಾಣವನ್ನಾಗಿ ರೂಪಿಸಲಾಗಿತ್ತು.
ಅಂದಿನ ಜಿಲ್ಲಾಧಿಕಾರಿ ದಿ. ಅನುರಾಗ್ ತಿವಾರಿ ಗದ್ದುಗೆ ಪ್ರವೇಶ ದ್ವಾರ ಬಳಿ ಪ್ರವಾಸಿ ಟಿಕೆಟ್ ಕೌಂಟರ್, ಸಾರ್ವಜನಿಕ ಶೌಚಾಲಯ, ಉಪಹಾರ ಗೃಹ ಇತ್ಯಾದಿ ನಿರ್ಮಿಸಿ ಅಲ್ಲಿಗೆ ಆದಾಯ ಮೂಲ ಕಂಡು ಹಿಡಿದು, ಗದ್ದುಗೆ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗದಂತೆ ಯೋಜನೆ ರೂಪಿಸಿದ್ದರು. ಈ ಅಧಿಕಾರಿಯ ವರ್ಗಾವಣೆಯೊಂದಿಗೆ ಯೋಜನೆ ಯೂ ಸತ್ತು ಹೋಗಿದೆ.
ಪರಿಣಾಮ ಇಂದು ರಾಜಗದ್ದುಗೆ ಸಹಿತ ಹೊರಾಂಗಣ ಬೆಳಕಿನ ಸೌಂದರ್ಯ,
ನೀರಿನ ಸೌಲಭ್ಯ ಎಲ್ಲವೂ
ಕೆಟ್ಟು ನಿಂತು
(ಮೊದಲ ಪುಟದಿಂದ) ತಿಂಗಳುಗಳೇ ಕಳೆದು ಹೋಗಿದ್ದರೂ ಯಾರೂ ಅತ್ತ ತಿರುಗಿಯೂ ನೋಡುತ್ತಿಲ್ಲ. ಒಂದೊಮ್ಮೆ ಜವಾಬ್ದಾರಿಯುತರ ನಿರ್ಲಕ್ಷ್ಯದಿಂದ ಈ ಗದ್ದುಗೆ ಗೋಪುರದ ಕಲಶ ಸಹಿತ ಹಿತ್ತಾಳೆಯ ಕಿಟಕಿ ಸರಳುಗಳು ಅನ್ಯರ ಪಾಲಾಗಿತ್ತು ಎಂದು ಸ್ಥಳೀಯರು ನೆನಪಿಸುತ್ತಾರೆ.
ಪ್ರಸಕ್ತ ನಿರ್ವಹಣೆಯಿಲ್ಲದೆ, ರಾತ್ರಿ ಕಾವಲು ಕಾಯುವವರೂ ನೇಮಕಗೊಳ್ಳದೆ ಈ ಪ್ರದೇಶ ಪುಂಡ ಪೋಲಿಗಳ ತಾಣವಾಗಿದ್ದು, ಸಂಜೆಗತ್ತಲೆ ಬಳಿಕ ತಿರುಗಾಡಲು ಭಯವಾಗುತ್ತಿದೆ ಎಂದು ಆ ಪ್ರದೇಶದ ಹೆಂಗಳೆಯರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಗದ್ದುಗೆ ರಕ್ಷಣೆಗೆ ಮುಂಜಾಗ್ರತಾ ಕ್ರಮದೊಂದಿಗೆ ಸೂಕ್ತ ರಕ್ಷಣಾ ಸಿಬ್ಬಂದಿ, ಪೂಜಾ ವ್ಯವಸ್ಥೆ, ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಸಾರ್ವಜನಿಕರು ‘ಶಕ್ತಿ’ ಮುಖಾಂತರ ಆಗ್ರಹಿಸಿದ್ದಾರೆ. -ಚಿತ್ರ, ವರದಿ : ಟಿ.ಜಿ. ಸತೀಶ್