ಮಡಿಕೇರಿ, ಜೂ.5 : ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವೆಂದು ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮೈಸೂರು ರಸ್ತೆ ಬಳಿ ಇರುವ ನಗರಸಭಾ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿದ್ಯಾರ್ಥಿ ಜೀವನ ದಿಂದಲೇ ಭದ್ರ ಬುನಾದಿ ಯನ್ನು ಹಾಕಿಕೊಳ್ಳುವ ಮೂಲಕ ವಿದ್ಯಾರ್ಥಿ ಗಳು ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಲು ಶ್ರಮಿಸಬೇಕೆಂದರು. ಆಧುನಿಕ ಯುಗದ ವ್ಯವಸ್ಥೆಗಳಿಗೆ ವಿದ್ಯಾರ್ಥಿಗಳು ಒಗ್ಗಿಕೊಳ್ಳಬೇಕಾದರೆ ಶೈಕ್ಷಣಿಕ ಸಾಧನೆಯ ಅಗತ್ಯವಿದೆ. ಇದಕ್ಕಾಗಿ ಪರಿಶ್ರಮ ಪಡಬೇಕು ಎಂದು ಜಿ.ರಾಜೇಂದ್ರ ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಯಂತಹ ಸಂಘಟನೆಗಳು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡು ವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾಜ ಸೇವಕ ವಾಸುದೇವ್ ಮಾತನಾಡಿ ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯವೆಂದರು. ಶಿಕ್ಷಕರಿಗೆ ಗೌರವ ನೀಡುವದರೊಂದಿಗೆ ಶಿಸ್ತುಬದ್ಧ ಜೀವನ ನಡೆಸುವಂತೆ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದ ಪೋಷಕರು ಸರಕಾರಿ ಶಾಲೆಯ ಮೇಲೆ ಕೀಳರಿಮೆ ತೋರುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆಯೊಂದಿಗೆ ತಾವು ಓದಿದ ಶಾಲೆಯ ಅಭ್ಯುದಯಕ್ಕೂ ಕೈಜೋಡಿಸಬೇಕಾಗಿದೆ ಎಂದರು.
ಗುತ್ತಿಗೆದಾರ ಐತ್ತಪ್ಪ ರೈ ಮಾತನಾಡಿ ದಲಿತ ಸಂಘರ್ಷ ಸಮಿತಿಯ ಕಾರ್ಯಕ್ರಮಗಳು ಶ್ಲಾಘನೀಯ ವಾಗಿದ್ದು, ಮುಂದಿನ ವರ್ಷ ತಾನೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡುವದಾಗಿ ಭರವಸೆ ನೀಡಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಹೆಚ್.ವಿ. ವಾಸುದೇವ್ ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಾಗ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್. ದಿವಾಕರ್ ಮಾತನಾಡಿ, ಸಾಮಾಜಿಕ ಬದಲಾವಣೆಗೆ ಶಿಕ್ಷಣವೊಂದೇ ಅಸ್ತ್ರವೆಂದರು. ಇಂದು ಸಮಾಜ ಬದಲಾವಣೆ ಹೊಂದಬೇಕಾದರೆ ಮಕ್ಕಳ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ. ಸರಕಾರಿ ಶಾಲೆ ವಿದ್ಯಾರ್ಥಿಗಳು ಕೂಡ ಇಂದು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂತ ಉತ್ತಮ ಅಂಕ ಪಡೆಯುತ್ತಿದ್ದಾರೆ. ಇದಕ್ಕೆ ಶಿಕ್ಷಕರ ಪಾತ್ರವೇ ಪ್ರಮುಖವಾಗಿದ್ದು, ಸಂಘಟನೆ ವತಿಯಿಂದ ವಿದ್ಯಾರ್ಥಿ ಗಳು ಮಾತ್ರವಲ್ಲದೆ ಶಿಕ್ಷಕರನ್ನು ಕೂಡ ಸನ್ಮಾನಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಬಡ ವಿದ್ಯಾರ್ಥಿಗಳಿಗೆ ಹಿರಿಯ ಅಧಿಕಾರಿಗಳ ಮೂಲಕ ಐಎಎಸ್, ಐಪಿಎಸ್ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಉತ್ತೇಜನ ನೀಡಲಾಗುತ್ತಿದೆ ಎಂದು ದಿವಾಕರ್ ತಿಳಿಸಿದರು.
ಅತಿಥಿ ಗಣ್ಯರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು. ನಗರಸಭೆ ಮಾಜಿ ಸದಸ್ಯ ಅಶ್ರಫ್, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎ.ಪಿ. ದೀಪಕ್ ಹಾಗೂ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.