ಕೂಡಿಗೆ, ಜೂ. 5: ಅರಣ್ಯದ ಪ್ರಮಾಣ ಹೆಚ್ಚಾದಂತೆ ಪ್ರಕೃತಿಯ ಸಮತೋಲನ ಕಾಪಾಡಲು ಅನುಕೂಲವಾಗುತ್ತದೆ. ಆದ್ದರಿಂದ ಪರಿಸರವನ್ನು ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸೋಮವಾರಪೇಟೆ ಜೆ.ಎಂ.ಎಫ್.ಸಿ ಹಿರಿಯ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಹೇಳಿದರು.

ಅರಣ್ಯ ಇಲಾಖೆ ಮಡಿಕೇರಿ, ಸೋಮವಾರಪೇಟೆ ವಲಯ, ಸೋಮವಾರಪೇಟೆ ಉಪ ವಿಭಾಗ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಡುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ನಿಮಿಷಕ್ಕೆ 2.5 ಹೆಕ್ಟೇರ್ ಅರಣ್ಯ ನಾಶವಾಗುತ್ತಿದೆ. ಒಂದು ಕ್ಷಣವು ಗಾಳಿಯಿಲ್ಲದೆ ಬದುಕಲು ಸಾಧ್ಯವಿಲ್ಲ. ಈ ಅಮೂಲ್ಯವಾದ ಗಾಳಿಯನ್ನು ಪಡೆಯಲು ಪರಿಸರದಲ್ಲಿ ಗಿಡ ನೆಡುವದರ ಮೂಲಕ ಪರಿಸರವನ್ನು ಉಳಿಸಬೇಕು. ಪರಿಸರ ಉಳಿಸುವ ಯೋಜನೆಗಳಿಗೆ ನಾವು ಆಧ್ಯತೆ ನೀಡಬೇಕು ಎಂದರು.

ಮುಖ್ಯ ಅತಿಥಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಕೊಡಗಿನ ಅರಣ್ಯ ಕಾಂಕ್ರಿಟ್ ಅರಣ್ಯವಾಗುತ್ತಿದೆ. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಜೊತೆಗೆ ಯಾವದೇ ಮರಗಳನ್ನು ಅನಾವಶ್ಯಕವಾಗಿ ಕಟಾವು ಮಾಡಲು ಅನುಮತಿ ನೀಡಬಾರದು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಎಸ್.ಭರಯ್ ಮಾತನಾಡಿ, ಪ್ರಕೃತಿಯ ಸಮತೋಲನವನ್ನು ಕಾಪಾಡಲು ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳ ನಿರ್ವಹಣೆ ಮುಖ್ಯವಾಗಿರುತ್ತದೆ. ರಾಸಾಯನಿಕ ವಸ್ತುಗಳ ಬಳಕೆಯಿಂದ ಭೂಮಿ ಮಾತ್ರವಲ್ಲದೇ, ಪ್ರಾಣಿ-ಪಕ್ಷಿಗಳು ಕೂಡಾ ನಾಶವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರಲ್ಲಿಯೂ ಪರಿಸರದ ಸಂರಕ್ಷಣೆಯ ಜವಬ್ದಾರಿ ಮುಖ್ಯವಾಗಿದೆ ಎಂದರು.

ಈ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್, ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ವಿಶ್ವನಾಥ್ ಬಾಡ್ಕರ್, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ, ತೋಟಗಾರಿಕಾ ಅಧಿಕಾರಿ ಗಣೇಶ್, ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರಾದ ಪ್ರೋ.ಮಂಜುಳಾ ಶಾಂತರಾವ್, ತೊರೆನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜ್, ಬಾಣವಾರ ಉಪ ವಲಯ ಅರಣ್ಯ ಅಧಿಕಾರಿ ಮಹದೇವ್‍ನಾಯಕ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಮತ್ತಿತರರು ಇದ್ದರು. ಜಯಮ್ಮ ಪ್ರಾರ್ಥಿಸಿ, ಗೋವಿಂದ್‍ರಾಜ್ ಸ್ವಾಗತಿಸಿ, ವಂದಿಸಿದರು.