ಹೆಬ್ಬಾಲೆ ಜೂ. 4 : ಇಲ್ಲಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ ಗ್ರಾಮದ ಎಡದಂಡೆ ನಾಲೆ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಹಳಗೋಟೆ ಸುತ್ತಮುತ್ತಲ ರೈತಾಪಿ ವರ್ಗ ತಮ್ಮ ಜಮೀನುಗಳಿಗೆ ತೆರಳಲು ನಾಲೆ ಏರಿ ರಸ್ತೆಯನ್ನೇ ಬಳಸುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಮಣ್ಣಿನ ಗುಡ್ಡ ಕುಸಿದು ಹೋಗಿರುವದರಿಂದ ರೈತರ ಎತ್ತಿನ ಗಾಡಿ ಅಥವಾ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಭಾಗದಲ್ಲಿ ಕಾಡಾನೆ ಹಾವಳಿ ಕೂಡ ಇದ್ದು, ರಾತ್ರಿ ವೇಳೆಯಲ್ಲಿ ಸಂಚರಿಸಲು ಕಷ್ಟಕರವಾಗಿದೆ. ಮಳೆಗಾಲ ಆರಂಭಗೊಂಡು ಮಣ್ಣು ಸಂಪೂರ್ಣ ಕುಸಿದು ಅಪಾಯ ಸಂಭವಿಸುವ ಮುನ್ನ ನೀರಾವರಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕೂಡಲೇ ನಾಲೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ನಿವಾಸಿ ರವಿಕುಮಾರ್ ಹಾಗೂ ಇತರರು ಒತ್ತಾಯಿಸಿದ್ದಾರೆ.