ಮಡಿಕೇರಿ, ಜೂ. 5: ಕೊಡಗಿನ ಪರಿಸರ, ನೆಲ, ಜಲ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡು ಕಾರ್ಯಾ ಚರಿಸುತ್ತಿರುವ ಕಾವೇರಿ ಸೇನೆಯ ನೂತನ ಅಧಿಕೃತ ಕಚೇರಿಯ ಉದ್ಘಾಟನೆ ಇಂದು ನೆರವೇರಿತು.

ಚಿಕ್ಕಪೇಟೆಯಲ್ಲಿರುವ ಸುಮುಖ್ ಕಾಂಪ್ಲೆಕ್ಸ್‍ನಲ್ಲಿ ತೆರೆಯಲಾಗಿರುವ ಕಚೇರಿಯನ್ನು ಸೇನೆಯ ಮಾಜಿ ಅಧ್ಯಕ್ಷ ಮುಕ್ಕಾಟಿ ಶಂಭು ಕಾರ್ಯಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಪೂರ್ವಿಕರು ಉಳಿಸಿಕೊಂಡು ಬಂದಿರುವ ನಮ್ಮ ಪರಿಸರವನ್ನು ಕಾಪಾಡಬೇಕು. ಇಲ್ಲಿ ಯಾವದೇ ಜಾತಿ - ಬೇಧವಿಲ್ಲದೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಕರೆ ನೀಡಿದರು.

ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಮಾತನಾಡಿ, ಕಾವೇರಿ ಸೇನೆ ರಚನೆಯಾಗಿ 13 ವರ್ಷಗಳಾಗಿದ್ದು, ಇದುವರೆಗೆ ಕಚೇರಿ ಇರಲಿಲ್ಲ. ಇದೀಗ ಎಲ್ಲರ ಸಹಕಾರದೊಂದಿಗೆ ಕಚೇರಿ ತೆರೆಯಲಾಗಿದೆ. ಕಾವೇರಿ ಸೇನೆಯ ಹೋರಾಟ ಮುಂದುವರಿಯಲಿದ್ದು, ಅರಣ್ಯ, ದೇವರಕಾಡು, ಒತ್ತುವರಿ, ಕೃಷಿಭೂಮಿಯನ್ನು ಕೃಷಿಯೇತರ ಭೂಮಿಗೆ ಪರಿವರ್ತಿಸುವದರ ವಿರುದ್ಧ ಕಾವೇರಿ ನದಿ ನೀರು ಸಂರಕ್ಷಣೆ ಕುರಿತು ಜನಜಾಗೃತಿಯೊಂದಿಗೆ ಅರಿವು ಮೂಡಿಸಲಾಗುವದು. ನೆಲ, ಜಲ, ಸಂಸ್ಕøತಿಯನ್ನು ಉಳಿಸಿ, ಬೆಳೆಸಿ ಆಸಕ್ತಿ ಇರುವವರು ಯಾರೂ ಕೂಡ ಸೇನೆಯೊಂದಿಗೆ ಕೈಜೋಡಿಸಲು ಮುಕ್ತ ಅವಕಾಶವಿದೆ ಎಂದು ಹೇಳಿದರು. ಜಿಲ್ಲೆಯ ಉಳಿವಿಗೆ ಸರ್ವರೀತಿಯ ಹೋರಾಟ ಮಾಡಲಾಗುವದೆಂದರು.

ಈ ಸಂದರ್ಭ ಸೇನೆಯ ಉಪಾಧ್ಯಕ್ಷ ಹೊಸಬೀಡು ಶಶಿ, ಪದಾಧಿಕಾರಿಗಳಾದ ಮುತ್ತು ರೈ, ಬಿದ್ದಪ್ಪ ಇನ್ನಿತರರಿದ್ದರು. ಕಾರ್ಯಾಧ್ಯಕ್ಷ ಕೋಲತಂಡ ರಘು ಮಾಚಯ್ಯ ಸ್ವಾಗತಿಸಿದರೆ, ಪದಾಧಿಕಾರಿ ಶಾಂತೆಯಂಡ ಸನ್ನಿ ಪೂವಯ್ಯ ವಂದಿಸಿದರು.