ಸೋಮವಾರಪೇಟೆ,ಜೂ.4: ಪಟ್ಟಣದಿಂದ ಶಾಂತಳ್ಳಿಗೆ ತೆರಳುತ್ತಿದ್ದ ಜೀಪ್ ಮತ್ತು ಕಕ್ಕೆಹೊಳೆ ಕಡೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಮಾರುತಿ ಓಮ್ನಿ ವಾಹನಗಳ ನಡುವೆ ಢಿಕ್ಕಿಯಾಗಿ ಚಾಲಕರುಗಳು ರಸ್ತೆ ಮಧ್ಯೆಯೇ ವಾಗ್ವಾದಕ್ಕಿಳಿದಿದ್ದರಿಂದ ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರಿತಪಿಸಿದ ಘಟನೆ ಇಂದು ಸಂಜೆ ನಡೆಯಿತು.
ಕಾನ್ವೆಂಟ್‍ಬಾಣೆಯ ನಿವಾಸಿಗೆ ಸೇರಿದ ಓಮ್ನಿ ಕಾರು ಹಾಗೂ ಶಾಂತಳ್ಳಿಯ ವ್ಯಕ್ತಿಗೆ ಸೇರಿದ ಜೀಪ್ ನಡುವೆ ಢಿಕ್ಕಿಯಾಗಿದ್ದು, ಯಾವದೇ ಹಚ್ಚಿನ ಅನಾಹುತ ಸಂಭವಿಸದಿದ್ದರೂ ಚಾಲಕರುಗಳ ನಡುವೆ ‘ತಪ್ಪಿ’ಗಾಗಿ ವಾಗ್ವಾದ ನಡೆಯಿತು.
ಸುಮಾರು 20 ನಿಮಿಷಗಳ ಕಾಲ ವಿವೇಕಾನಂದ ವೃತ್ತದ ಬಳಿ ರಸ್ತೆಯ ಮಧ್ಯೆಯೇ ಚರ್ಚೆ ನಡೆಸಿದ್ದರಿಂದ ಇತರ ವಾಹನಗಳ ಓಡಾಟಕ್ಕೆ ಸಂಪೂರ್ಣ ತಡೆಬಿದ್ದಿತ್ತು. ಸಂತೆ ದಿನವಾದ್ದರಿಂದ ಸಾರ್ವಜನಿಕ ವಾಹನಗಳು, ಆಟೋ ರಿಕ್ಷಾಗಳು, ಶಾಲಾ ವಾಹನಗಳು, ಬಸ್ ಸೇರಿದಂತೆ ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಲುಗಡೆಗೊಂಡವು.
20 ನಿಮಿಷ ಕಳೆದ ಸ್ಥಳಕ್ಕಾಗಮಿಸಿದ ಪೊಲೀಸರು ಎರಡೂ ವಾಹನಗಳನ್ನು ಬದಿಗೆ ಸರಿಸಿ ಇತರ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು.