ವೀರಾಜಪೇಟೆ, ಜೂ. 3: ಪಟ್ಟಣದ ಜೈನರ ಬೀದಿಯಲ್ಲಿನ ಚಾಣಕ್ಯ ಎಜುಕೇಶನ್ ಟ್ರಸ್ಟ್‍ನ ವತಿಯಿಂದ ತಾ. 10 ರಂದು ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಯ ಕುರಿತ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷೆ ಸಿ.ಎನ್. ಕವಿತಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗೆ ಅಗತ್ಯ ಪ್ರಮಾಣದಲ್ಲಿ ಮಾಹಿತಿ ದೊರೆಯುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಟ್ರಸ್ಟ್ ಪ್ರಯತ್ನಿಸುತ್ತಿದೆ. ಪಟ್ಟಣದ ಜೈನರ ಬೀದಿಯಲ್ಲಿನ ಕಲ್ಪವೃಕ್ಷ ಆರ್ಕೆಡ್ ಕಟ್ಟಡದಲ್ಲಿನ ಟ್ರಸ್ಟ್‍ನ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಅಪರಾಹ್ನ 1 ರವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಮೈಸೂರು ಹಾಗೂ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಚಿತವಾಗಿ ಕಾರ್ಯಗಾರದಲ್ಲಿ ಭಾಗವಹಿಸಬಹುದು. ನೋಂದಾಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 8277496007 ಅನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ. ಗೋಷ್ಠಿಯಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷ ಕಿಶೋರ್ ಕುಮಾರ್, ಕಾರ್ಯದರ್ಶಿ, ಮಾಚಮ್ಮ ಹಾಗೂ ನಿರ್ದೇಶಕ ವಿನೋದ್ ಉಪಸ್ಥಿತರಿದ್ದರು.