ಕುಶಾಲನಗರ, ಜೂ. 3: ಕೊಡಗು ಜಿಲ್ಲೆಯಲ್ಲಿ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿರುವದು ಒಂದೆಡೆಯಾದರೆ ಕಿಷ್ಕಿಂಧೆಯಾಗಿ ಪರಿವರ್ತನೆಗೊಂಡಿರುವ ಕುಶಾಲನಗರದಲ್ಲಿ ಅವಘಡಗಳೊಂದಿಗೆ ಪ್ರಾಣಹಾನಿಯಾಗುತ್ತಿರುವದು ಪ್ರಸಕ್ತ ಬೆಳವಣಿಗೆಯಾಗಿದೆ.

ಜನಸಂಖ್ಯೆ ಹೆಚ್ಚುತ್ತಿದ್ದಂತೆ ವಾಹನಗಳ ಸಂಖ್ಯೆಯೂ ಕೂಡ ಏರಿಕೆಯಾಗುತ್ತಿದ್ದು, ಕುಶಾಲನಗರ ಹೆದ್ದಾರಿ ಮೂಲಕ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ವಾರಾಂತ್ಯದ ಸಂದರ್ಭ ಪ್ರವಾಸಿಗರ ವಾಹನಗಳು ಹೆಚ್ಚುವರಿಯಾಗಿ ಸಾಗುತ್ತಿದ್ದು ರಸ್ತೆಯಲ್ಲಿ ಸಂಚಾರದ ಒತ್ತಡ ಅಧಿಕಗೊಳ್ಳುತ್ತಿದೆ. ದಿನನಿತ್ಯ ಈ ಮಾರ್ಗದಲ್ಲಿ ಅಸಮರ್ಪಕ ಸಂಚಾರಿ ವ್ಯವಸ್ಥೆಯಿಂದ ದೈನಂದಿನ ಚಟುವಟಿಕೆಗಳಿಗೆ ಓಡಾಡಲು ಅಡ್ಡಿಯುಂಟಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ನಿಯೋಜನೆಗೊಂಡಿದ್ದರೂ ಇದರಿಂದ ಯಾವದೇ ರೀತಿಯ ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಸಂಚಾರಿ ಠಾಣೆಗೆ ಅವೈಜ್ಞಾನಿಕವಾಗಿ ವ್ಯಾಪ್ತಿ ಪ್ರದೇಶವನ್ನು ನೀಡಿ ಹೊರಡಿಸಿರುವ ಅಧಿಸೂಚನೆಯೇ ಈ ಎಲ್ಲಾ ಆವಾಂತರಗಳಿಗೆ ಪ್ರಮುಖ ಕಾರಣವಾಗಿದೆ. ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಈ ಸಂದರ್ಭ ಇಡೀ ಸಂಚಾರಿ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಕುಶಾಲನಗರಕ್ಕೆ ಪರ್ಯಾಯವಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದಲ್ಲಿ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಸಾಧ್ಯ ಎನ್ನುವದು ತಜ್ಞರ ಅಭಿಪ್ರಾಯವಾಗಿದೆ.

ವಾಹನ ದಟ್ಟಣೆ ಸಮಸ್ಯೆ ಒಂದೆಡೆಯಾದರೆ ಪಟ್ಟಣದ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಕಾರಣ ಸ್ಥಳೀಯ ಆಡಳಿತ, ಸಂಚಾರಿ ಪೊಲೀಸರಿಗೆ ತಲೆನೋವಿನ ವಿಚಾರವಾಗಿದ್ದರೆ ಪಟ್ಟಣದ ವರ್ತಕ ಸಮೂಹಕ್ಕೆ ಕೂಡ ಇದು ಶಾಪವಾಗಿ ಪರಿಣಮಿಸುತ್ತಿದೆ ಎಂದರೆ ತಪ್ಪಾಗಲಾರದು. ಬಹುತೇಕ ರಸ್ತೆಯನ್ನು ಆವರಿಸಿಕೊಂಡು ಪಟ್ಟಣ ವ್ಯಾಪ್ತಿಯಲ್ಲಿ ನಿಯಮ ಮೀರಿ ಕೆಲವು ವಹಿವಾಟುಗಳು ನಡೆಯುತ್ತಿರುವದು ಇದಕ್ಕೆ ಕಡಿವಾಣ ಹಾಕುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ.

ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಆಟೋಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಲೇ ಇದ್ದು ಆಟೋ ನಿಲ್ದಾಣಗಳಿಗೆ ಸೂಕ್ತ ಸ್ಥಳಾವಕಾಶ ಕೊರತೆ ಉಂಟಾಗಿರುವ ಹಿನ್ನೆಲೆ ರಾಜ್ಯ ಹೆದ್ದಾರಿ ಬದಿಗಳಲ್ಲೇ ತಾತ್ಕಾಲಿಕ ಆಟೋ ನಿಲ್ದಾಣಕ್ಕೆ ಜಾಗ ಒದಗಿಸಿರುವದು ಕಾಣಬಹುದು. ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಒಂದೆಡೆ ಸರಕಾರಿ ಬಸ್ ನಿಲ್ದಾಣ, ಸಮೀಪದಲ್ಲಿ ಖಾಸಗಿ ಬಸ್‍ಗಳ ನಿಲುಗಡೆ, ಎಲ್ಲೆಂದರಲ್ಲಿ ಆಟೋ ನಿಲ್ದಾಣಗಳು, ಪ್ರವಾಸಿಗರ ವಾಹನಗಳ ನಿಲುಗಡೆ ಇದರೊಂದಿಗೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಹೆದ್ದಾರಿ ಬದಿಯ ಲಾಡ್ಜ್‍ಗಳು ಯಾವದೇ ವಾಹನ ನಿಲುಗಡೆಗೆ ಜಾಗ ಮೀಸಲಿರಿಸದೆ ಇರುವದು ಈ ಅವ್ಯವಸ್ಥೆಗೆ ಕಾರಣವಾಗಿದೆ.

ಇನ್ನು ಕಾರು ನಿಲ್ದಾಣದ ವಿಚಾರಕ್ಕೆ ಬಂದಲ್ಲಿ ಇಲ್ಲಿಯೂ ಕೂಡ ಸಮಸ್ಯೆ ಕಾಣಬಹುದು. ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಹಲವು ಟ್ಯಾಕ್ಸಿಗಳು ಸಾರಿಗೆ ಸಂಸ್ಥೆಯ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಅಕ್ರಮವಾಗಿ ಬಿಡಾರ ಹೂಡಿರುವದು ಕಾಣಬಹುದು. ಖಾಸಗಿಯವರು ತಮ್ಮ ವಾಹನಗಳನ್ನು ನಿಲುಗಡೆಗೊಳಿಸಿ ದೂರದೂರಿಗೆ ತೆರಳುವದನ್ನು ಕಾಣಬಹುದು.

ಇದರ ನಡುವೆ ಒಳಚರಂಡಿ ಮತ್ತಿತರ ರಸ್ತೆ ಕಾಮಗಾರಿಗಳಿಂದಾಗಿ ಗುಂಡಿಬಿದ್ದಿರುವ ರಸ್ತೆಗಳು ಸಂಚಾರಕ್ಕೆ ತೊಡಕುಂಟಾಗಿದೆ. ಅಲ್ಲಲ್ಲಿ ರಸ್ತೆಗಳನ್ನು ಅಗೆಯುತ್ತಿರುವ ಕಾರಣ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಾದ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ದಟ್ಟಣೆಯೊಂದಿಗೆ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿರುವದರಿಂದ ನಿಗದಿತ ಸಮಯದಲ್ಲಿ ಕಚೇರಿಗಳಿಗೆ ತೆರಳಬೇಕಾದ ನೌಕರರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಿಡಿಶಾಪ ಹಾಕುವದು ದಿನನಿತ್ಯ ಕಾಣಬಹುದು.

ವಾಹನ ದಟ್ಟಣೆಗಳನ್ನು ನಿಯಂತ್ರಿಸಲು ಪಟ್ಟಣದಲ್ಲಿ ಅಲ್ಲಲ್ಲಿ ಸಿಗ್ನಲ್‍ಗಳು, ಬ್ಯಾರಿಕೇಡ್‍ಗಳನ್ನು ಅಳವಡಿಸುವದರೊಂದಿಗೆ ಕೆಲವು ಮಾರ್ಗಗಳನ್ನು ಏಕಮುಖ ಸಂಚಾರ ರಸ್ತೆಯಾಗಿ ಸಂಚಾರಿ ಪೊಲೀಸರು ಮಾರ್ಪಾಡು ಮಾಡಿದ್ದಾರೆ. ಆದರೆ ಯಾವದೇ ವ್ಯವಸ್ಥೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದರೆ ತಪ್ಪಾಗಲಾರದು.

ಈ ನಡುವೆ ಕುಶಾಲನಗರ ಪಟ್ಟಣ ಪಂಚಾಯಿತಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲು ಮುಂದಾಗಿದ್ದು ಈ ಬೃಹತ್ ವಾಣಿಜ್ಯ ಸಂಕೀರ್ಣದ ಕೆಳಭಾಗದಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವ ಚಿಂತನೆ ಹೊಂದಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾಹಿತಿ ನೀಡಿದ್ದಾರೆ. ಪಟ್ಟಣದಲ್ಲಿ ಲಭ್ಯವಿರುವ ಖಾಲಿ ಜಾಗಗಳನ್ನು ಬಳಸಿದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡಲು ಸಾಧ್ಯವಿದ್ದರೂ ಕೆಲವು ಸ್ವಾರ್ಥ ಸಾಧಕರ ಹಿತಾಸಕ್ತಿಯಿಂದ ಇದು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಗೊಂಡ ಬಳಿಕ ನೆಲ ಅಂತಸ್ತಿನಲ್ಲಿ 150 ಸಂಖ್ಯೆಯ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಒದಗಿಸಲಾಗುವದು. ಇದರಲ್ಲಿ 30 ಟ್ಯಾಕ್ಸಿಗಳಿಗೆ ಮೀಸಲಿರಿಸಲಾಗಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕ ಕ್ರಿಯಾಯೋಜನೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪಂಚಾಯಿತಿ ಚಿಂತನೆ ಹರಿಸಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. - ಚಂದ್ರಮೋಹನ್