ಪೊನ್ನಂಪೇಟೆ, ಜೂ. 3 : ಇದೇ ತಿಂಗಳ 8 ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ವಿ.ಪಿ. ಶಶಿಧರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿರುವ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ವಿದ್ಯಾವಂತ ಮತ್ತು ಬುದ್ದಿವಂತ ಮತದಾರರು ಬದಲಾವಣೆ ಬಯಸಿದ್ದಾರೆ, ಅಲ್ಲದೆ ಇದುವರೆಗೂ ಬಿ.ಜೆ.ಪಿ. ಕೈಯಲ್ಲಿದ್ದ ಈ ಎರಡು ಸ್ಥಾನಗಳು ನಿಜವಾಗಿಯೂ ಅದರ ಗೌರವವನ್ನು ಉಳಿಸಿಕೊಳ್ಳಲಿಲ್ಲ. ಅದ್ದರಿಂದ ಇದೆಲ್ಲ್ಲವೂ ಕಾಂಗ್ರೆಸ್ಗೆ ವರದಾನವಾಗಲಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ ಎಂದು ಹೇಳಿದರು.
ವಿಧಾನ ಪರಿಷತ್ತಿನಲ್ಲಿ ನೈರುತ್ಯ ಪದವೀಧರರ ಕ್ಷೇತ್ರವನ್ನು ಕಳೆದ 30 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಡಿ.ಎಚ್. ಶಂಕರಮೂರ್ತಿ ಅವರ ಇದುವರೆಗಿನ ಸಾಧನೆ ಶೂನ್ಯವಾಗಿದೆ. ಪ್ರತಿ ಚುನಾವಣೆಯಲ್ಲಿ ಕೊಡಗಿನ ಪದವೀಧರರ ಮತಗಳನ್ನು ಪಡೆದು ಬಳಿಕ ಕೊಡಗಿನ ಸಮಸ್ಯೆಗಳತ್ತ ತಿರುಗಿ ನೋಡಲಿಲ್ಲ ಎಂದಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಹಾಲಿ ಪ್ರತಿನಿಧಿ ಗಣೇಶ್ ಕಾರ್ಣಿಕ್ ಅವರು ಹಿಂದೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ ಎಂದು ಆರೋಪಿಸಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಅವರು ಕೊಡಗಿನ ಸ್ಥಳೀಯರಾಗಿದ್ದಾರೆ. ಅದ್ದರಿಂದ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾದ ಎಸ್.ಪಿ. ದಿನೇಶ್ ಮತ್ತು ಕೆ.ಕೆ. ಮಂಜುನಾಥ್ ಕುಮಾರ್ ಅವರ ಗೆಲುವಿಗಾಗಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ವಿ.ಪಿ. ಶಶಿಧರ್ ಅವರು ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ ಮಾತನಾಡಿದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ಆರ್.ಕೆ. ಅಬ್ದುಲ್ ಸಲಾಂ, ಬಿ.ಎನ್. ಪ್ರಕಾಶ್, ನರೇಂದ್ರ ಕಾಮತ್, ಎ.ಜೆ.ಬಾಬು, ಕೋದಂಡ ಸೋಮಣ್ಣ, ಚೊಟ್ಟಯಂಡಮಾಡ ವಿಶ್ವನಾಥ್ ಸೇರಿದಂತೆ ವಿವಿಧ ಪ್ರಮುಖರು ಮತ್ತು ಕಾರ್ಯಕರ್ತರು ಹಾಜರಿದ್ದರು.