ಮಡಿಕೇರಿ, ಜೂ. 3: ರಕ್ತದಾನ ಮಾಡುವದರಿಂದ ದಾನ ಮಾಡಿದವರ ಆರೋಗ್ಯ ವೃದ್ಧಿಯಾಗಲಿದೆ ವಿನಾಃ ಧಕ್ಕೆ ಉಂಟಾಗದು ಎಂದು ಮಡಿಕೇರಿಯ ಡಾ. ರವಿ ಕರುಂಬಯ್ಯ ಅಭಿಪ್ರಾಯಪಟ್ಟರು. ನವೋದಯ ವಿದ್ಯಾಲಯ ಅಲ್ಯುಮುನಿ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದ ದಿನ ಸ್ವಲ್ಪ ಕಾಲ ವಿಶ್ರಾಂತಿ ಪಡೆದುಕೊಂಡು ನಿತ್ಯ ಚಟುವಟಿಕೆ ನಡೆಸಬಹುದಾಗಿದೆ. ರಕ್ತದಲ್ಲಿನ ಎಲ್ಲಾ ಅಂಶಗಳು ಪುನಶ್ಚೇತನಗೊಳ್ಳಲು ಒಂದು ವಾರದ ಕಾಲವಕಾಶ ಸಾಕಾಗುತ್ತದೆ ಎಂದು ಅವರು ವಿವರಿಸಿದರು. ಅಲ್ಲದೆ ರಕ್ತದಾನ ಮಾಡುವದರಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗು ವದಲ್ಲದೆ, ಹೊಸ ರಕ್ತ ಕಣದೊಂದಿಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸಮಾರಂಭ ಉದ್ಘಾಟಿಸಿದ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಮಾತನಾಡಿ, ಅನ್ನದಾನ, ಭೂದಾನ, ಕನ್ಯಾದಾನ, ಗೋದಾನ ಇತ್ಯಾದಿ ರೂಢಿಯಿದೆ. ಇಂದಿನ ಆಧುನಿಕ ಕಾಲದಲ್ಲಿ ವೃತ್ತಿಜೀವನದಲ್ಲಿ ಕುಳಿತೇ ಕೆಲಸ ಮಾಡುವದರಿಂದ ಆರೋಗ್ಯ ಕುಂಠಿತಗೊಳ್ಳಲಿದೆ. ಇಂತಹ ಸಂದರ್ಭ ಆರೋಗ್ಯ ಕುಂಠಿತಗೊಂಡು, ಹೆರಿಗೆ ಸಂದರ್ಭ, ಅವಘಡ ಸನ್ನಿವೇಶಗಳಲ್ಲಿ ಅಂತಹವರ ಪ್ರಾಣಾಪಾಯ ತಪ್ಪಿಸುವ ಸಲುವಾಗಿ ರಕ್ತದಾನ ಮಹತ್ವ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ನವೋದಯ ಪ್ರಾಂಶುಪಾಲ ಪಿ.ಎಂ. ಐಸಾಕ್ ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮದಿಂದ ಈ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು. ಅಶ್ವಿನಿ ಕಾರ್ಯದರ್ಶಿ ಎಸ್.ಎಸ್. ಸಂಪತ್‍ಕುಮಾರ್ ಮಾತನಾಡಿ, ‘ವೈದ್ಯೋನಾರಾಯಣಾ ಹರಿ’ ಎಂಬಂತೆ ವೈದ್ಯರ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪೂರಕವಾಗಿ ರಕ್ತದಾನ ಶಿಬಿರ ಪ್ರಮುಖವಾಗಲಿದೆ ಎಂದರು. ಡಾ. ಕೆ.ಎಂ. ಬೋಪಣ್ಣ ಅವರಿಂದ ಸ್ವಾಗತ, ನವೀನ್ ಅವರಿಂದ ನಿರೂಪಣೆ, ಕೆ.ಪಿ. ಪೊನ್ನಣ್ಣ ಅವರಿಂದ ವಂದನಾರ್ಪಣೆ ನೆರವೇರಿತು. ಮದೆ ಮಹೇಶ್ವರ ಪ್ರಾಂಶುಪಾಲೆ ಗುಲಾಬಿ ಉಪಸ್ಥಿತರಿದ್ದರು.