ವೀರಾಜಪೇಟೆ, ಜೂ. 3: ಪ್ರತಿಯೊಬ್ಬರು ಜೀವನದಲ್ಲಿ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆಧ್ಯಾತ್ಮಿಕತೆ ಮಾನವನನ್ನು ಅಂಧಕಾರದಿಂದ ಬೆಳಕಿನೆಡೆಗೆ ಪರಿರ್ತಿಸುವ ಒಂದು ಅದ್ಭುತ ಶಕ್ತಿ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಹೇಳಿದರು.

ಇಲ್ಲಿನ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸೇವಾ ಕೇಂದ್ರದ ನೂತನ ‘ಜ್ಞಾನಗಂಗಾ ಭವನ’ವನ್ನು ಉದ್ಘಾಟಿಸಿದ ಅವರು, ಬ್ರಹ್ಮಕುಮಾರಿ ಸೇವಾ ಕೇಂದ್ರಗಳಲ್ಲಿ ಅಧಿಕವಾಗಿ ಮಾತೆಯರು ಸೇವೆ ಸಲ್ಲಿಸುತ್ತಿರುವ ದರಿಂದ ಸೇವಾ ಕೇಂದ್ರಕ್ಕೆ ಇನ್ನಷ್ಟು ಮೌಲ್ಯ ದೊರೆತಂತಾಗಿದೆ ಎಂದರು. ನಾಲ್ಕೂವರೆ ದಶಕಗಳಿಂದ ವೀರಾಜಪೇಟೆ ಸೇರಿದಂತೆ ಕೊಡಗಿನ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿಶ್ವದ 140 ರಾಷ್ಟ್ರಗಳಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮೂಲಕ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿರುವದು ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಸಮಾರಂಭವನ್ನುದ್ದೇಶಿಸಿ ಮೈಸೂರು ನಗರ ಪಾಲಿಕೆಯ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾಂತಿ ಸತೀಶ್, ಮೈಸೂರಿನ ರಾಮಕೃಷ್ಣ, ನಿವೃತ್ತ ಡಿ.ವೈಎಸ್ಪಿ. ಕೃಷ್ಣಮೂರ್ತಿ ಬ್ರಹ್ಮಕುಮಾರಿ ಸೇವಾ ಸಂಸ್ಥೆಯಲ್ಲಿನ ಅವರ ಅನುಭವಗಳ ಮಾಹಿತಿ ನೀಡಿದರು. ಸೇವಾ ಸಂಸ್ಥೆಯ ಗಾಯಿತ್ರಿಜೀ ರಾಜಾ ಯೋಗದ ಶಿಕ್ಷಣ ಕುರಿತು ವಿವರ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಉಪ ವಲಯದ ಬ್ರಹ್ಮಕುಮಾರೀಸ್ ಸಂಸ್ಥೆಯ ನಿರ್ದೇಶಕಿ ರಾಜಯೋಗಿನಿ ಬಿ.ಕೆ. ಲಕ್ಷ್ಮೀಜಿ, ಮಾತನಾಡಿ ಕೊಡಗು ಜಿಲ್ಲೆಯ ಉತ್ತಮ ಪರಿಸರದಲ್ಲಿ ವೀರಾಜಪೇಟೆ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಬ್ರಹ್ಮಕುಮಾರಿ ಸೇವಾ ಕೇಂದ್ರಗಳು ಸ್ಥಾಪಿತಗೊಂಡಿದೆ ಸಮಾಜದಲ್ಲಿ ಶಾಂತಿಯನ್ನು ತರಲು ತಮ್ಮ ಶಕ್ತಿ ಹಾಗೂ ಶುಭ ಆಶಯಗಳನ್ನು ಉಪಯೋಗಿಸಿ ತೃಪ್ತಿ ಪಡೆಯಬಹುದಾಗಿದೆ ಎಂದರು.

ಬ್ರಹ್ಮಕುಮಾರೀಸ್ ಸೇವಾ ಕೇಂದ್ರದ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಫಿ ಮಂಡಳಿಯ ಸತೀಶ್ ಚಂದ್ರ ಸ್ವಾಗತಿಸಿದರು. ಬ್ರಹ್ಮಕುಮಾರೀಸ್‍ನ ಸೇವಾಕೇಂದ್ರದ ಪ್ರಮುಖ ಬಿ.ಕೆ.ರಂಗನಾಥ್ ನಿರೂಪಿಸಿದರು. ರಾಮಚಂದ್ರಜೀ ವಂದಿಸಿದರು.