ವೀರಾಜಪೇm,É ಜೂ. 3: ವೀರಾಜಪೇಟೆ ತಾಲೂಕು ಭೌಗೋಳಿಕವಾಗಿ ಅತಿ ದೊಡ್ಡ ಪ್ರದೇಶ ಹಾಗೂ ಜನಸಂಖ್ಯೆ ಹಾಗೂ ಅಧಿಕ ಗ್ರಾಮಗಳ ಆಧಾರದ ಮೇಲೂ ಇದು ದೊಡ್ಡ ತಾಲೂಕು ಆಗಿರುವದರಿಂದ ಇದನ್ನು ವಿಂಗಡಿಸಿ ಪೊನ್ನಂಪೇಟೆಯ ಸುತ್ತಮುತ್ತಲ ಗ್ರಾಮಗಳನ್ನು ಹೊಂದಿಕೊಂಡಂತೆ ಪೊನ್ನಂಪೇಟೆಯ ಹೊಸ ತಾಲೂಕನ್ನು ರಚಿಸುವದು ನ್ಯಾಯಸಮ್ಮತವಾಗಿದೆ ಎಂದು ಜಾತ್ಯತೀತ ಜನತಾದಳದ ಮೇರಿಯಂಡ ಸಂಕೇತ್ ಪೂವಯ್ಯ ಅವರು ಪೊನ್ನಂಪೇಟೆಯ ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ವೇದಿಕೆಯ ಆಯೋಗಕ್ಕೆ ಅಭಿಮತ ವ್ಯಕ್ತಪಡಿಸಿದರು.
ಪೊನ್ನಂಪೇಟೆಯ ತಾಲೂಕು ಪುನರ್ ರಚನಾ ಹೋರಾಟ ಸಮಿತಿ ಮತ್ತು ಪೊನ್ನಂಪೇಟೆಯ ನಾಗರಿಕ ಸಮಿತಿಯ ನಿಯೋಗ ಪೊನ್ನಂಪೇಟೆ ತಾಲೂಕು ಪುನರಚನೆ ಕುರಿತು ಸಂಕೇತ್ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದಾಗ ಮನವಿಯನ್ನು ಪರಿಶೀಲಿಸಿದ ಸಂಕೇತ್ ಅವರು ಈ ಸಂಬಂಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಎರಡು ದಿನಗಳೊಳಗೆ ಸಂಪರ್ಕಿಸಿ ಇದನ್ನು ಅವರ ಗಮನಕ್ಕೆ ತರಲಾಗುವದು ಜೊತೆಗೆ ಪೊನ್ನಂಪೇಟೆ ತಾಲೂಕು ಪುನರ್ ರಚನೆ ಆಯೋಗವನ್ನು ಕುಮಾರಸ್ವಾಮಿ ಅವರೊಂದಿಗೆ ಖುದ್ದು ಭೇಟಿ ಮಾಡಿಸಿ ಸಮಸ್ಯೆಯನ್ನು ಬಗೆ ಹರಿಸಲಾಗುವದು, ಕಳೆದ ಏಪ್ರಿಲ್ ತಿಂಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ವೀರಾಜಪೇಟೆಗೆ ಆಗಮಿಸಿದಾಗ ಪಕ್ಷದ ಸಮಾವೇಶದ ಕೊನೆಯಲ್ಲಿ ಸಂಕೇತ್ ಪೂವಯ್ಯ ಅವರು ನೀಡಿದ್ದು, ಮನವಿಯನ್ನು ಪುರಸ್ಕರಿಸಿ ಜನತಾದಳ ಸರಕಾರದಿಂದ ರೈತರ ಸಾಲ ಮನ್ನಾದೊಂದಿಗೆ ಪೊನ್ನಂಪೇಟೆ, ಕುಶಾಲನಗರವನ್ನು ಹೊಸ ತಾಲೂಕುಗಳಾಗಿ ರಚಿಸಲಾಗುವದು ಎಂದು ವಾಗ್ದಾನ ನೀಡಿದ ಹಿನ್ನೆಲೆಯಲ್ಲಿ ಇದನ್ನು ಅವರ ಗಮನಕ್ಕೆ ತಂದು ಬೇಡಿಕೆ ಈಡೇರಿಸಲಾಗುವದು ಎಂದು ಆಯೋಗಕ್ಕೆ ಭರವಸೆ ನೀಡಿದರು. ಅಲ್ಲದೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ತಕ್ಷಣ ದಿನಾಂಕ ನಿಗಧಿ ಮಾಡುವದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಬಿ.ಪೂಣಚ್ಚ, ಹೋರಾಟ ಸಮಿತಿಯ ಉಪಾಧ್ಯಕ್ಷ ಸಿ.ಕೆ.ಸೋಮಯ್ಯ, ಕಾನೂನು ಸಲಹೆಗಾರರಾದ ಪಿ.ಅಪ್ಪಚ್ಚು, ಪದಾಧಿಕಾರಿಗಳಾದ ಎಂ.ಎಸ್.ಕುಶಾಲಪ್ಪ ಹಾಜರಿದ್ದರು.