ಸೋಮವಾರಪೇಟೆ, ಜೂ. 3: ತಾ. 8ರಂದು ನಡೆಯಲಿರುವ ನೈರುತ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಜಯ ಗಳಿಸುವದು ನಿಶ್ಚಿತವಾಗಿದ್ದು, ಶಿಕ್ಷಕರು ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ ಎಂದು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಗಣೇಶ್ ಕಾರ್ಣಿಕ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರಪೇಟೆಯಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದ ಗಣೇಶ್ ಕಾರ್ಣಿಕ್ ಅವರು ನಂತರ ಕಾರ್ಯಕರ್ತರೊಂದಿಗೆ ಮಾತನಾಡಿ, ವಿದ್ಯಾವಂತ ಮತದಾರರು ಭಾರತೀಯ ಜನತಾ ಪಾರ್ಟಿಯ ಪರವಾಗಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಅವಿರತ ಶ್ರಮದಿಂದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವದಾಗಿ ನುಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ರಾಜ್ಯದಲ್ಲಿ 152 ಸರ್ಕಾರಿ ಪದವಿ ಕಾಲೇಜುಗಳಿದ್ದರೆ ನಮ್ಮ ಸರ್ಕಾರ 191 ಕಾಲೇಜುಗಳಿಗೆ ಪ್ರಾಂಶುಪಾಲ/ ಉಪನ್ಯಾಸಕರನ್ನು ನೇಮಿಸಿ ತಲಾ 2 ಕೋಟಿ ಅನುದಾನದೊಂದಿಗೆ ಪ್ರಾರಂಭಿಸಿತು ಎಂದು ಕಾರ್ಣಿಕ್ ಹೇಳಿದರು.
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ತಾಂತ್ರಿಕ ಶಿಕ್ಷಣಕ್ಕಾಗಿ 11 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದ್ದು, ಕೊಡಗಿನಲ್ಲೂ 1 ಕಾಲೇಜು ಕಾರ್ಯಾರಂಭ ಮಾಡುತ್ತಿದೆ. ಈ ಹಿಂದೆ ಇದ್ದ 4 ಮೆಡಿಕಲ್ ಕಾಲೇಜುಗಳ ಜತೆಗೆ 6 ಹೊಸ ಕಾಲೇಜನ್ನು ಪ್ರಾರಂಭಿಸಲಾಗಿದೆ. ಹುದ್ದೆಗಳು ಖಾಲಿ ಆದರೆ ತಕ್ಷಣ ಭರ್ತಿ ಮಾಡುವ ಆದೇಶವನ್ನು ಬಿಜೆಪಿ ಸರ್ಕಾರ ತಂದಿದೆ. ಕರ್ನಾಟಕ ಕೌಶಲ್ಯ ಆಯೋಗ, ಜ್ಞಾನ ಆಯೋಗವನ್ನು ಪ್ರಾರಂಭಿಸಿ, ಸಂಗೀತ, ಸಾಹಿತ್ಯ, ಜನಪದ, ಕೃಷಿ, ಪಶುವೈದ್ಯ ವಿಶ್ವವಿದ್ಯಾಲಯಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಶಿಕ್ಷಣ ಕ್ಷೇತ್ರಕ್ಕಾಗಿಯೇ 18 ಸಾವಿರ ಕೋಟಿ ಅನುದಾನ ನೀಡಿ ಮಹತ್ತರ ಬದಲಾವಣೆ ಮಾಡಿದ್ದೇವೆ. ಬಿಜೆಪಿ ಸರ್ಕಾರವಿದ್ದಾಗ ಅರ್ಹತೆ ಮತ್ತು ಸೇವಾ ಹಿರಿತನವನ್ನು ಆಧರಿಸಿ ಪಾರದರ್ಶಕ ವರ್ಗಾವಣೆ ನಡೆದಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ 2 ವೇತನ ಆಯೋಗದ ವರದಿಯನ್ನು ಯಥಾವತ್ ಜಾರಿಗೆ ತಂದು ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿದೆ. ಆದರೆ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ವೇತನ ತಾರತಮ್ಯವನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದರು.
ಈ ಸಂದರ್ಭ ಬಿಜೆಪಿ ಶಿಕ್ಷಕ ಪ್ರಕೋಷ್ಠದ ಅಧ್ಯಕ್ಷ ಜೆ.ಸಿ. ಶೇಖರ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪಕ್ಷದ ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ, ರಾಜ್ಯ ಸಮಿತಿ ಸದಸ್ಯೆ ಸುಮಾ ಸುದೀಪ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಕಿಬ್ಬೆಟ್ಟ, ಕಾರ್ಯದರ್ಶಿ ಶ್ರೀಕಾಂತ್, ಮುಖಂಡರಾದ ಜಲಜಾ ಶೇಖರ್, ಎನ್.ಎಸ್. ಮೂರ್ತಿ, ಕೊಮಾರಿ ಸತೀಶ್, ಚೇತನ್, ಪಿ.ಕೆ. ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.