ಮಡಿಕೇರಿ, ಜೂ. 2: ಮೋದೂರು, ಕಡಗದಾಳು ಸುತ್ತಮುತ್ತ 17 ಕಾಡಾನಗಳ ಹಿಂಡು ಉಪಟಳ ನೀಡುತ್ತಿರುವ ಕಾರಣ; ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಇಂದು ಕೂಡ ಮುಂದುವರಿದಿದೆ. ಕಾಫಿ ತೋಟಗಳ ನಡುವೆ ಅಡ್ಡಾಡುತ್ತಾ ರೈತರ ಕೃಷಿ ಫಸಲು ನಾಶಗೊಳಿಸುತ್ತಿರುವ ಕಾಡಾನೆಗಳನ್ನು ಮೀನುಕೊಲ್ಲಿ ಮೀಸಲು ಅರಣ್ಯದತ್ತ ಓಡಿಸಲು ನಿನ್ನೆಯಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿವೆ.ಈ ಹಿಂಡು ತೋಟಗಳ ನಡುವೆ ನುಸುಳುತ್ತಾ ಎಲ್ಲೆಂದರಲ್ಲಿ ಸಾಗುತ್ತಿದ್ದು, ಇಂದು ಕೂಡ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಮೂಹಿಕ ಪ್ರಯತ್ನದೊಂದಿಗೆ ಸತತ ಎರಡನೇ ದಿನವೂ ಕಾಡಾನೆಗಳನ್ನು ಕಾಡಿಗೆ ಅಟ್ಟಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಸ್ಪಷ್ಟಪಡಿಸಿದರು.