ಕುಶಾಲನಗರ, ಜೂ. 2: ಪ್ರಕೃತಿಯನ್ನು ಪೂಜಿಸಿ ಆರಾಧಿಸುವದ ರೊಂದಿಗೆ ರಕ್ಷಿಸಿದಲ್ಲಿ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದು ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯದ ಪಾರುಪತ್ತೆದಾರರಾದ ರಮೇಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಮನಾಥಪುರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ನದಿಗೆ ನಡೆದ ನದಿ ಸ್ವಚ್ಛತಾ ಅಭಿಯಾನ ಮತ್ತು 25ನೇ ತಿಂಗಳ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದ ಅವರು, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ನದಿ ಸಂರಕ್ಷಣೆಯ ಅರಿವು ಜಾಗೃತಿ ಮೂಡಿಸುತ್ತಿರುವ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರ ಮೋಹನ್, ಕಾವೇರಿ ಮೂಲ ದಿಂದಲೇ ನದಿ ಕಲುಷಿತ ಗೊಳ್ಳುತ್ತಿರುವದು ಆತಂಕಕಾರಿ ವಿಷಯ. ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯದಿಂದ ಧರೆಯಲ್ಲಿ ಏರುಪೇರು ಉಂಟಾಗುವದ ರೊಂದಿಗೆ ಮುಂದಿನ ದಿನಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ ಎಂದರು.

ನದಿ ಜಲಮೂಲಗಳ ಸಂರಕ್ಷಣೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಕೆಲಸ ಸಾಗಬೇಕಾಗಿದೆ ಎಂದರು. ಸುಬ್ರಹ್ಮಣ್ಯೇಶ್ವರ ದೇವಾಲಯ ಬಳಿ ನದಿ ತಟದಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು. ನಂತರ 25ನೇ ಮಹಾ ಆರತಿ ಬೆಳಗಲಾಯಿತು. ಕೂಡಿಗೆ ಕಾವೇರಿ ವಿರಕ್ತ ಮಠದ ಶ್ರೀ ಸಿದ್ದಗಂಗಾ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಹಾಸನ ಜಿಲ್ಲಾ ಸಂಚಾಲಕ ಎಂ.ಎನ್. ಕುಮಾರಸ್ವಾಮಿ, ಮುಖ್ಯಸ್ಥರಾದ ಆರ್.ಎಸ್. ನರಸಿಂಹಮೂರ್ತಿ, ರಾಘವೇಂದ್ರ ಮಠದ ದಿವಾನರಾದ ಶ್ರೀ ಕನಕ ಆಚಾರ್ಯ, ಪಂಚಾಯಿತಿ ಸದಸ್ಯ ಎಸ್. ದಿವಾಕರ್, ಅರ್ಚಕ ಶ್ರೀನಾಥ್, ಸಮಿತಿ ಸದಸ್ಯರಾದ ಸಿದ್ದರಾಜು, ಬಾಬು, ಮೋಹನ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಪಾರುಪತ್ತೆದಾರ ರಾದ ರಮೇಶ್ ಭಟ್, ಎಂ.ಎನ್. ಚಂದ್ರಮೋಹನ್, ಮೋಹನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.