ಶನಿವಾರಸಂತೆ, ಜೂ. 2: ಮರಿಯಾನೆ ಜತೆಗಿದ್ದ 2 ದೊಡ್ಡ ಕಾಡಾನೆಗಳು ಸಮೀಪದ ರಾಮನಹಳ್ಳಿ ಮುಖ್ಯರಸ್ತೆಯ ಬದಿಯಲ್ಲಿ ಹಲಸಿನ ಮರದಿಂದ ಹಣ್ಣು ಕಿತ್ತು ತಿಂದು ದಾಂಧಲೆ ಎಬ್ಬಿಸಿ ಹೋಗಿರುವ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.

ಈ ಮೂರು ಕಾಡಾನೆಗಳು ಕಳೆದ ಮೂರು ದಿನಗಳಿಂದಲೂ ಬೆಳಗ್ಗಿನ ಜಾವ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಲಸಿನ ಹಣ್ಣಿಗಾಗಿ ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮಾಲಂಬಿಬೆಟ್ಟದಿಂದ ಇಳಿದು ಬಂದಿರುವ ಕಾಡಾನೆಗಳು ರಾಮನಹಳ್ಳಿಯಲ್ಲಿ ಹಣ್ಣು ತಿಂದ ಬಳಿಕ ಮಾದೇಗೋಡು ಗ್ರಾಮದ ಮೂಲಕ ಗೋಪಾಲಪುರಕ್ಕೆ ಬಂದಿದ್ದು, ಗದ್ದೆಯಲ್ಲಿದ್ದ ಪಂಪ್ ಸೆಟ್‍ನ 20 ಪೈಪ್ ಲೈನ್ ಹಾಗೂ ಮೋಟಾರ್ ಅನ್ನು ಎಳೆದು ಮೇಲ್ಭಾಗದ ಕೆರೆಗೆ ಎಸೆದು ಹೋಗಿವೆ. ಗೋಪಾಲಪುರ ಎಸ್ಟೇಟ್‍ನಲ್ಲೇ ಠಿಕಾಣಿ ಹೂಡಿವೆ ಎಂದು ದೂರಿದ್ದಾರೆ.