ಶನಿವಾರಸಂತೆ: ಸಮೀಪದ ನಿಡ್ತ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವ ನಡೆಯಿತು.

ಶಾಲಾ ಮುಖ್ಯ ಶಿಕ್ಷಕಿ ಯಶೋಧಾ ಗುಲಾಬಿ ಹೂಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಸ್ವಾಗತಿಸಿದರು. ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ವರ್ಷದ ಪಠ್ಯ ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಪಾಯಸ - ಸಿಹಿಯೂಟ ಏರ್ಪಡಿಸಲಾಗಿತ್ತು.

ಹಂಡ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಧುಕುಮಾರ್, ಸಹ ಶಿಕ್ಷಕರಾದ ದಿನೇಶ್, ರತ್ನಾ, ಸುನೀತಾ, ರೋಸಿ ಹಾಗೂ ಸಿಬ್ಬಂದಿ ಹಾಜರಿದ್ದರು.ಮುಳ್ಳೂರು: ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸಂಭ್ರಮ - ಸಡಗರದಿಂದ ಆಚರಿಸಲಾಯಿತು.

ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ತಳಿರು - ತೋರಣಗಳಿಂದ ಶೃಂಗರಿಸಲಾಗಿತ್ತು. ಶಿಕ್ಷಕರು ಪ್ರತಿ ವಿದ್ಯಾರ್ಥಿಗೂ ಹೂ ನೀಡಿ ತರಗತಿಗೆ ಸ್ವಾಗತಿಸಿದರು. ಪ್ರಾರ್ಥನೆಯ ನಂತರ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಗ್ರಾಮದಲ್ಲಿ ಜಾಥಾ ತೆರಳಿದರು. ಶಿಕ್ಷಣದ ಮಹತ್ವವನ್ನು ಸಾರುವ ಘೋಷಣೆಗಳನ್ನು ಕೂಗುತ್ತಾ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು. ಜಾಥಾದ ಹಾದಿಯಲ್ಲೇ ಗ್ರಾಮದ ಮನೆಗಳಿಗೆ ತೆರಳಿ 5 ವರ್ಷ, 5 ತಿಂಗಳು ತುಂಬಿದ ದುಷ್ಯಂತ್, ತನ್ವಿ, ವಿದ್ಯಾ ಮತ್ತು ನವ್ಯಾ ಎಂಬ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಯಿತು.

ಶಾಲೆಗೆ ಮರಳಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಯೋಜನೆಯ ಬಗ್ಗೆ ಚರ್ಚಿಸಲಾಯಿತು. ಮುಖ್ಯ ಶಿಕ್ಷಕ ಮಂಜುನಾಥ್ ವಿದ್ಯಾರ್ಥಿಗಳಿಗೆ 2018-19ರ ಶೈಕ್ಷಣಿಕ ಸಾಲಿನ ಹೊಸ ಪಠ್ಯ ಪುಸ್ತಕಗಳನ್ನು ವಿತರಿಸಿದರು.

ಸಹ ಶಿಕ್ಷಕ ಸಿ.ಎಸ್. ವಸಂತ್, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ನಿರಂಜನ್, ಚಂದ್ರಶೇಖರ್, ಜಾನಕಿ, ಪ್ರಮೀಳಾ, ಜಯಮ್ಮ, ಸಿಬ್ಬಂದಿ ಕುಮಾರಿ ಹಾಜರಿದ್ದರು. ಶಾಲಾ ಪ್ರಾರಂಭೋತ್ಸವ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಪಲಾವ್ ಮತ್ತು ಪಾಯಸದ ಸಿಹಿಯೂಟ ಏರ್ಪಡಿಸಲಾಗಿತ್ತು.