ಮಡಿಕೇರಿ, ಜೂ. 2: ರಾಜ್ಯದ ವಿಧಾನ ಪರಿಷತ್‍ಗೆ ಕೊಡಗು ಜಿಲ್ಲೆ ಸೇರಿದಂತೆ ಎರಡು ಸ್ಥಾನಗಳಿಗೆ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ತಾ. 8 ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸಭೆ ಅಧ್ಯಕ್ಷ ಎಂ.ಬಿ. ಶಿವು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಚುನಾವಣೆಗೆ ಸಂಬಂಧಿಸಿ ದಂತೆ ಪೂರ್ವಭಾವಿ ಸಿದ್ಧತೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಮಡಿಕೇರಿ ಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪಕ್ಷದ ಪ್ರಮುಖ ನಾಯಕರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಹಾಗೂ ಜಿಲ್ಲಾ ಕಾಂಗ್ರೆಸ್‍ನ ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಶಿವು ಮಾದಪ್ಪ ಮಾತನಾಡಿ, ಅಭ್ಯರ್ಥಿಗಳ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಪದವೀಧರ ಕ್ಷೇತ್ರದ ಎಸ್.ಪಿ. ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಕೆ.ಕೆ. ಮಂಜುನಾಥ್ ಕುಮಾರ್ ಕಳೆದ ಚುನಾವಣೆಯಲ್ಲಿ ಸುಮಾರು 180 ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು. ಆದರೆ ಈ ಬಾರಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಶಿಕ್ಷಕರು ಹಾಗೂ ಪದವೀಧರರಿಗೆ ಅನೇಕ ಕಾರ್ಯಕ್ರಮ ಗಳನ್ನು ರೂಪಿಸಿದೆ ಹಾಗೂ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಿ ಸಾವಿರಾರು ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸಿರುವದು ಇವರುಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ತಿಳಿಸಿದ್ದಾರೆ. ಸಭೆಯಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪಿದ ಕಾಂಗ್ರೆಸ್‍ನ ಹಿರಿಯ ಮುಖಂಡ ಶಾಸಕ ಸಿದ್ದು ನ್ಯಾಮೇಗೌಡ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಸದಸ್ಯ ಟಿ.ಪಿ. ರಮೇಶ್, ಸುಮಾ ವಸಂತ್, ಬ್ಲಾಕ್ ಅಧ್ಯಕ್ಷರುಗಳಾದ ವಿ.ಪಿ. ಶಶಿಧರ್, ಬಿ.ವೈ. ರವೀಂದ್ರ, ರಮಾನಾಥ್, ನರೇಂದ್ರ ಕಾಮತ್, ತೆನ್ನೀರಾ ಮೈನಾ, ವಿ.ವಿ. ಸುರೇಶ್, ಹೆಚ್.ಎಂ. ನಂದ ಕುಮಾರ್, ಪ್ರಕಾಶ್ ಆಚಾರ್ಯ, ನವೀನ್ ಕುಶಾಲಪ್ಪ, ಮಧು, ಸುನೀಲ್ ಪತ್ರಾವೊ, ಸುರಯ್ಯಾ ಅಬ್ರಾರ್, ವಿಶ್ವನಾಥ್, ಅಬ್ದುಲ್ ರೆಹಮಾನ್ ಪಾಲ್ಗೊಂಡಿದ್ದರು.