ಪೊನ್ನಂಪೇಟೆ, ಜೂ.1: ದಕ್ಷಿಣ ಕೊಡಗಿನ ಬೇರಳಿನಾಡು ಎಂಬದು ರುದ್ರಗುಪ್ಪೆ, ವಿ.ಬಾಡಗ, ಪೊದಕೇರಿ, ಕಂಡಂಗಾಲ, ಪೆಗ್ಗರಿಮಾಡು, ಮರೋಡಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿರುವ ಸ್ಥಳ. ಈ ವ್ಯಾಪ್ತಿಯಲ್ಲಿ ವರ್ಷಂಪ್ರತಿ ಮೇ 31ರ ರಾತ್ರಿಯಿಂದ ಜೂನ್ 1ರ ಸಂಜೆಯ ತನಕ ಸಂಭ್ರಮವೋ ಸಂಭ್ರಮ. ಕೇವಲ ಇಲ್ಲಿನ ನಿವಾಸಿಗಳು ಮಾತ್ರವಲ್ಲ ಅಪಾರ ಬಂಧುಮಿತ್ರರು ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ನೋಡುಗರು ಇಲ್ಲಿ ಬೆರೆಯುತ್ತಾರೆ. ಇದು ಯಾವದೇ ಒಂದು ಸಂಭ್ರಮ ಮಾತ್ರವಲ್ಲ. ಇದಕ್ಕಿಂತಲೂ ಮಿಗಿಲಾಗಿ ದೈವಿಕ ಭಾವನೆಯ ಸಮ್ಮಿಲನದ ಕಾರ್ಯವಿದು. ಕೊಡಗಿನ ಪ್ರಸಿದ್ಧ ಬೇಡು ಹಬ್ಬಗಳಲ್ಲಿ ಒಂದಾಗಿರುವ ಈ ಹಬ್ಬ ‘ಪಾರಣ ನಮ್ಮೆ’ ಎಂದು ಪ್ರತೀತವಾಗಿದೆ. ಬೇಡು ಹಬ್ಬಗಳ ಪೈಕಿ ಇದು ಕೊನೆಯ ಹಬ್ಬವೂ ಆಗಿದೆ.ಪುರಾತನ ಕಾಲದಿಂದ ಬಂದಿರುವ ಜನಪದೀಯ ಹಾಡಿನಂತೆ ‘ಕುಂದತ್ ಬೊಟ್ಟ್‍ಲ್ ನೇಂದ ಕುದುರೆ, ಪಾರಣ ಮಾನಿಲ್ ಅಳ್‍ಂಜ ಕುದುರೆ’ ಎಂಬ ಐತಿಹಾಸಿಕ ಹಿನ್ನೆಲೆಯ ಈ ಉತ್ಸವಕ್ಕೆ ಜೂನ್ 1 ರಂದು ತೆರೆ ಬಿದ್ದಿದೆ. ಕಾವೇರಿ ಸಂಕ್ರಮಣದ ಸಂದರ್ಭ ಕುಂದ ಗ್ರಾಮದಿಂದ ಕುದುರೆ ಹಬ್ಬ ಆರಂಭಗೊಂಡು ಈ ದಿನದಂದು ವಿಶಿಷ್ಟತೆಯ ಈ ಬೇಡು ಹಬ್ಬ ಕೊನೆಗೊಳ್ಳುತ್ತದೆ. ಮೇ 31 ರ ರಾತ್ರಿಯಿಂದ ವಿವಿಧ ವೇಷಧಾರಿಗಳು ಈ ವ್ಯಾಪ್ತಿಯ ಪ್ರತಿ ಮನೆ ಮನೆಗಳಿಗೂ ತೆರಳುತ್ತಾರೆ. ಈ ಹಬ್ಬಕ್ಕೆ ಮೇ 26 ರಂದು ಚಾಲನೆ ದೊರೆಯಲಿದ್ದು, ಕೊನೆಯ ಈ ಎರಡು ದಿನಗಳು ವಿಶೇಷವಾಗಿ ಆಚರಿಸಲ್ಪಡುವದು ವಾಡಿಕೆ.
ಮೇ 31ರ ಗುರುವಾರ ರಾತ್ರಿಯಿಂದ ಜೂನ್ 1ರ ಶುಕ್ರವಾರದಂದು ದಕ್ಷಿಣ ಕೊಡಗಿನ ಬೇರಳಿನಾಡಿನ ಯಾವದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆ(ಹಬ್ಬ)ಯ ವೇಷದಾರಿಗಳ ಸಾಂಪ್ರದಾಯಿಕ ನೃತ್ಯ ಸಾಮಾನ್ಯ ವಾಗಿತ್ತು. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಗ್ರಾಮದ ಪುರಾತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಅದನ್ನು ಜೀವಂತವಾಗಿರಿಸುವ ಪ್ರಯತ್ನದಲ್ಲಿ ಎಲ್ಲರೂ ಮಗ್ನರಾಗಿದ್ದರು. ಹೀಗೆ ಬೇರಳಿನಾಡಿನಾದ್ಯಂತ ಪಾರಣ ಹಬ್ಬದ ಕಲರವದಿಂದಾಗಿ ಬೇಡು ಹಬ್ಬಕ್ಕೆ ವಿಶೇಷ ಕಳೆ ಬಂದಂತಿತ್ತು.
ಎರಡು ದಿನಗಳ ಕಾಲ ಸಂಭ್ರಮಿಸಿದ ಬೇರಳಿನಾಡಿನ ಗ್ರಾಮಸ್ಥರು ಶುಕ್ರವಾರ ಸಂಜೆ ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ವಿಶಿಷ್ಟವಾಗಿ ಬೀಳ್ಕೊಟ್ಟರು.
(ಮೊದಲ ಪುಟದಿಂದ) ಕೊಡವರ ಪ್ರಸಿದ್ದ ನಾಣ್ನುಡಿಯಾದ ‘ಕುಂದತ್ ಬೊಟ್ಟ್‍ಲ್ ನೇಂದ ಕುದುರೆ, ಪಾರಣಮಾನಿಲ್ ಅಳ್‍ಂಜ ಕುದುರೆ’ ಎಂಬಂತೆ ಪಾರಣ ಬೇಡುಹಬ್ಬದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ಕುದುರೆಯಾಕೃತಿಯನ್ನು ಕಡಿಯುವದರ ಮೂಲಕ ಕೊಡಗಿನ ಕೊನೆಯ ಬೇಡು ಹಬ್ಬಕ್ಕೆ ಮಂಗಳ ಹಾಡಲಾಯಿತು.
ದಕ್ಷಿಣ ಕೊಡಗಿನ 9 ಕೇರಿಗಳನ್ನು ಒಳಗೊಂಡಿರುವ ಬೇರಳಿನಾಡಿನಲ್ಲಿ ಶುಕ್ರವಾರ ದಿನ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಬೇರೆಡೆಗಳಲ್ಲಿ ನೆಲೆಸಿರುವ ಗ್ರಾಮವಾಸಿಗಳು ದೂರ ದೂರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ಆಗಮಿಸಿ ಪಾರಣಮಾನಿ ಹಬ್ಬಕ್ಕೆ ಸಾಕ್ಷಿಯಾದರು. ವರ್ಷಕ್ಕೊಮ್ಮೆ ನಡೆಯುವ ಈ ವಿಶಿಷ್ಟ ಹಬ್ಬದಂದು ದೇಶದ ಯಾವದೇ ಭಾಗದಲ್ಲಿದ್ದರೂ ಬೇರಳಿನಾಡಿನ ನಿವಾಸಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಭಿಮಾನದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುವದು ವಾಡಿಕೆಯಾಗಿದೆ. ಬೆಳಿಗ್ಗಿನಿಂದಲೇ ಬೇರಳಿನಾಡಿನ 9 ಕೇರಿಗಳಲ್ಲಿ ಪಾರಣಮಾನಿ ಹಬ್ಬದ ಪ್ರತೀಕವಾಗಿ ವಿವಿಧ ವೇಷಧಾರಿಗಳು ಅಲ್ಲಲ್ಲೇ ಗುಂಪಾಗಿ ಮನೆ ಮನೆಗೆಳಿಗೆ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಗುಂಪುಗಳಲ್ಲಿ ಮಹಿಳೆಯರಂತೆ ವೇಷ ಧರಿಸಿದ್ದ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದರು. ಚೂಳೆಕಳಿ, ಒಡ್ಡಕಳಿ, ಪಾಲೆಕುರುಡು, ಪಾಪರೆ ಜೋಗಿ, ಚಿಕ್ಕಮಜೋಗಿ, ಬೈರಮಜೋಗಿ ಇತ್ಯಾದಿ ವೇಷಧಾರಿಗಳಿರುತ್ತಾರೆ.
ಹಬ್ಬದ ಆಚರಣೆ ಬಗ್ಗೆ : ಪ್ರತೀ ವರ್ಷದ ಕಾದ್ಯಾರ್ 17 ಮತ್ತು 18 ರಂದು ಅಂದರೆ ಮೇ 31 ಹಾಗೂ ಜೂನ್ 1 ರಂದು ಪಾರಣ ಬೇಡುಹಬ್ಬ ವಿಜೃಂಭಣೆಯಿಂದ ಜರುಗುತ್ತದೆ. ಪಾರಣ ಬೇಡುಹಬ್ಬಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಬೇಡು ಹಬ್ಬದ ಕೊನೆಯಲ್ಲಿ ವಿಶೇಷವಾಗಿ ಗಮನ ಸೆಳೆಯುವ 3 ಕುದುರೆ ಹಾಗೂ 2 ಆನೆಯ ಆಕೃತಿಗಳು ಹಸಿ ಬಿದಿರಿನಿಂದ ತಯಾರಿಸಲ್ಪಡುತ್ತದೆ. ಈ ಬಿದಿರನ್ನು ಪ್ರತೀ ವರ್ಷ ವಿ.ಬಾಡಗದ ಅಂಬಲದ ಸಮೀಪವಿರುವ ‘ದೇವರ ಕುದುರೆ ಪುಂಡ’ ಬಿದಿರು ಕಾಡಿನಿಂದ ತರುತ್ತಾರೆ. ಹಲವು ಶತಮಾನ ಗಳಾದರೂ ವಿ.ಬಾಡಗದ ಬಿದಿರು ಕಾಡಿನಲ್ಲಿ ಇದುವರೆಗೂ ಬಿದಿರು ನಾಶಗೊಂಡಿಲ್ಲ. ಆದ್ದರಿಂದ ಈ ಬಿದಿರು ಕಾಡಿನ ಬಗ್ಗೆ ಅಪಾರ ನಂಬಿಕೆ ಹೊತ್ತಿರುವ ಗ್ರಾಮವಾಸಿಗಳು ಕಾದ್ಯಾರ್ 17 ರಂದು ಹೊರತುಪಡಿಸಿದರೆ ವರ್ಷದ ಇನ್ಯಾವದೇ ದಿನಗಳಲ್ಲಿ ಇಲ್ಲಿಯ ಬಿದಿರನ್ನು ಕಡಿಯುವದಿಲ್ಲ. ಇದು ಸದಾ ಹಚ್ಚಹಸಿರಾಗಿರುತ್ತದೆ.
ಹಬ್ಬ ಹೀಗೆ ನಡೆಯುತ್ತದೆ : ಹಬ್ಬಕ್ಕೆ 5 ದಿನಗಳ ಮುಂಚಿತವಾಗಿ ಇಡೀ ಬೇರಳಿನಾಡಿನಲ್ಲಿ ಪಾರಣಮಾನಿ ಹಬ್ಬದ ಕಟ್ಟು ಬೀಳುತ್ತದೆ. ಕಾದ್ಯಾರ್ 17 ರಂದು ಬೆಳಿಗ್ಗಿನ ಜಾವ ವಿವಿಧ ಕೇರಿನಾಡಿನ ಅಂಬಲದಲ್ಲಿ ಬಂದು ಸೇರುವ ಗ್ರಾಮವಾಸಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅಲ್ಲಿನ ಜೋಡು ಭಗವತಿ ದೇವಸ್ಥಾನದಲ್ಲಿ ಬಂದು ಮತ್ತೊಂದು ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಬಳಿಕ ನಿರ್ದಿಷ್ಟ ಸಂಖ್ಯೆಯಲ್ಲಿ ನಾಡಿನ ಕೆಲವರು ಕಂಜಿತಂಡ ಕುಟುಂಬಸ್ಥರ ನೇತೃತ್ವದಲ್ಲಿ ಭಂಡಾರ, ಪೂಜೆ ಮತ್ತು ಅಡಿಗೆ ಸಾಮಾನುಗಳನ್ನು ಹೊತ್ತು ಸುಮಾರು 14 ಕಿ.ಮೀ ದೂರದ ಬೆಟ್ಟದಲ್ಲಿರುವ ‘ಕಮ್ಮಟ್ಟ್‍ಮಲೆ’ಗೆ ತೆರಳುತ್ತಾರೆ. ‘ಕಮ್ಮಟ್ಟ್‍ಮಲೆ’ಯಲ್ಲಿರುವ ಉದ್ಭವಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾಮೂಹಿಕ ಬೋಜನ ಸ್ವೀಕರಿಸಿದ ಬಳಿಕ ಪುರೋಹಿತರು ‘ಪಾರಣ ಪಾಟ್’ಗೆ ಚಾಲನೆ ನೀಡಿ ಬೆಟ್ಟ ಇಳಿಯಲಾರಂಭಿಸುತ್ತಾರೆ. ‘ಕಮ್ಮಟ್ಟ್‍ಮಲೆ’ಯಿಂದ ಆಗಮಿಸಿದ ತಂಡ ಮತ್ತೆ ಅಂಬಲಗಳಲ್ಲಿ ಬಂದು ಸೇರುತ್ತಾರೆ.
ಈ ತಂಡ ಆಗಮಿಸಿದ ಬಳಿಕವಷ್ಟೇ ಪಾರಣಮಾನಿ ಹಬ್ಬಕ್ಕೆ ಚಾಲನೆ ದೊರೆಯುವದು ಸಂಪ್ರದಾಯ. ನಂತರ ನಾಡಿನ ವಿವಿಧ ಗ್ರಾಮಗಳ ತಕ್ಕರುಗಳ ಮನೆಯಲ್ಲಿ ‘ಕಳಿ’ (ವೇಷಧಾರಿಗಳ ಗುಂಪು) ಆರಂಭ ಗೊಳ್ಳುತ್ತದೆ. ಇದಕ್ಕೂ ಮೊದಲು ಕಾದ್ಯಾರ್ 17 ರಂದು ಬೆಳಿಗ್ಗೆ ಗ್ರಾಮವಾಸಿಗಳ ಮತ್ತೊಂದು ತಂಡ ಬಾಡಗದ ಬಿದಿರು ಕಾಡಿಗೆ ತೆರಳಿ ಕೃತಕ ಆನೆ ಮತ್ತು ಕುದುರೆಯಾಕೃತಿಗೆ ಅಗತ್ಯವಿರುವ ಹಸಿ ಬಿದಿರನ್ನು ತಂದು ಸಿದ್ದತೆ ಮಾಡಿಕೊಳ್ಳುತ್ತಾರೆ. ಬೇಡು ಹಬ್ಬದ ಭಾಗವಾಗಿ ನಾಡಿನಲ್ಲಿರುವ ಭದ್ರಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ಸಾಂಪ್ರದಾಯಿಕವಾದ ವಿಧಿವಿಧಾನ ವನ್ನು ಪೂರೈಸಲಾಗುತ್ತದೆ. ಹಿಂದಿನ ದಿನ ರಾತ್ರಿಯಿಂದಲೇ ಬೇರಳಿನಾಡಿನ ಪ್ರತೀ ಮನೆ ಮನೆಗಳಿಗೆ ತೆರಳುವ ವಿವಿಧ ಕೇರಿಗಳ ವೇಷಧಾರಿಗಳ ಗುಂಪು ಪದ್ದತಿಯನ್ನು ಪೂರ್ಣ ಗೊಳಿಸುತ್ತಾರೆ. ನಾಡಿಗೆ ಸಂಬಂಧಿಸಿದ ಗ್ರಾಮಗಳಲ್ಲಿ ಆಯಾ ಕುಟುಂಬಸ್ಥರ ಐನ್‍ಮನೆಗಳಿಗೆ ವೇಷಧಾರಿಗಳ ತಂಡ ತೆರಳುವದು ವಾಡಿಕೆ. ಹಬ್ಬದ ಕೊನೆಯ ದಿನದಂದು ಬೆಳಿಗ್ಗೆಯಿಂದಲೇ ‘ಕಳಿ’ ಮುಂದುವರಿಯುತ್ತದೆ.
ಎರವರ ‘ಚೀನಿ ದುಡಿ’ ಸಾಥ್: ‘ಕಳಿ’ ತಂಡಗಳೊಂದಿಗೆ 4 ಡೋಳುಗಳನ್ನು ಹೊತ್ತು ಅವುಗಳನ್ನು ಭಾರಿಸುತ್ತ ಪಾರಣ ಹಾಡುಗಳನ್ನು ಹಾಡುತ್ತ ಮನೆ ಮನೆಗೆ ತೆರಳುವ ವೇಷಧಾರಿಗಳು ಬೇಡು ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಇವರೊಂದಿಗೆ ಕೊಡಗಿನ ಎರವರ ಸಾಂಪ್ರದಾಯಿಕ ಚೀನಿ ಮತ್ತು ದುಡಿ ತಂಡ ಹಿಂಬಾಲಿಸುತ್ತಾ ವಾದ್ಯ ನುಡಿಸುವದು ಮತ್ತೊಂದು ವಿಶೇಷವಾಗಿರುತ್ತದೆ. ಕೊಡಗಿನಾದ್ಯಂತ ಎರವರ ಚೀನಿ ದುಡಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪಾರಣ ಬೇಡು ಹಬ್ಬದಲ್ಲಿ ಎರವರ ಚೀನಿ ದುಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡು ತ್ತಿರುವದು ಇಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ.
ಸಂಭ್ರಮದ ತೆರೆ: ನಾಡಿನ ಮನೆ ಮನೆಗಳಿಗೆ ತೆರಳಿ ಸಂಜೆ ವೇಳೆಗೆ ನಿರ್ದಿಷ್ಟ ಅಂಬಲಕ್ಕೆ ಬಂದು ಸೇರುತ್ತಾರೆ. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಗ್ರಾಮವಾಸಿಗಳು ಮತ್ತು ವೇಷಧಾರಿಗಳ ತಂಡ ಸ್ಥಳದಲ್ಲಿ ಅದ್ಭುತವಾದ ಲೋಕವನ್ನೇ ಸೃಷ್ಟಿಸಿರುತ್ತಾರೆ. ‘ಕಳಿ’ ಆರಂಭಗೊಂಡ ತಕ್ಕರುಗಳ ಮನೆಯಲ್ಲೇ ‘ಕಳಿ’ ಅಂತ್ಯವಾಗುತ್ತದೆ. ಬಳಿಕ ಕೋಡಂಗಿದಾಸ ಮತ್ತು ಪಾಲೆಕರುಂಬ ಎಂಬ ವೇಷಧಾರಿ ಗಳೊಡನೆ ಪಾರಣ ಮಾನಿಗೆ ಬಂದು ಸೇರುವ ಗ್ರಾಮವಾಸಿಗಳು ಗ್ರಾಮದ ಮನೆಗಳಿಂದ ಸಂಗ್ರಹಿಸಲಾದ ಸಿಂಬಿಗಳನ್ನು ಮಾನಿಗೆ ಎಸೆಯುತ್ತಾರೆ. ಈ ವೇಳೆಗಾಗಲೇ ಶೃಂಗಾರಗೊಂಡು ಸಿದ್ದವಾಗಿರುವ ಕೃತಕ 2 ಆನೆ ಮತ್ತು 3 ಕುದುರೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಮಾನಿಯ ಪಕ್ಕದಲ್ಲೇ ಇರುವ ಗದ್ದೆಯಲ್ಲಿ ಕುಣಿದು ಕುಪ್ಪಳಿಸುತ್ತ ಹಬ್ಬವನ್ನು ಸಂಭ್ರಮಿಸುತ್ತಾರೆ. ಅಲ್ಲಿ ಕೃತಕ ಆನೆ ಮತ್ತು ಕುದುರೆ ಕಡಿಯುವ ಮೂಲಕ ಪಾರಣ ಬೇಡು ಹಬ್ಬಕ್ಕೆ ಅಂತಿಮ ತೆರೆ ಎಳೆಯುತ್ತಾರೆ. ಹೀಗೆ ದಕ್ಷಿಣ ಕೊಡಗಿನ ಪ್ರತೀ ಊರುಗಳಲ್ಲಿ ಸಹೋದರತೆ ಮತ್ತು ಸಾಮರಸ್ಯ ಸಂಕೇತವಾಗಿ ನಡೆಯುವ ಬೇಡು ಹಬ್ಬಗಳ ಪೈಕಿ ವೈಶಿಷ್ಟ್ಯಪೂರ್ಣವಾಗಿ ಆಚರಿಸಲ್ಪಡುವ ಪಾರಣ ಬೇಡು ಹಬ್ಬ ಮುಕ್ತಾಯಗೊಳ್ಳುವ ಮೂಲಕ ಜನತೆಯ ಚಿತ್ತ ಮುಂಗಾರಿನ ಕೃಷಿ ಚಟುವಟಿಕೆಗಳತ್ತ ಹರಿಯುತ್ತದೆ.