ಮಡಿಕೇರಿ, ಜೂ. 2: ಜಿಲ್ಲೆಯಲ್ಲಿ ಜೂ. 1 ರಿಂದ 26 ರವರೆಗೆ ಜಾನುವಾರುಗಳಿಗೆ ತಗಲುವ ಕಾಲುಬಾಯಿ ಜ್ವರ ತಡೆಯಲು 14ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,19,852 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ದೇಶಿ ತಳಿಯ 55,595, ಮಿಶ್ರ ತಳಿ ದನ 32,833, ಎಮ್ಮೆ 14,476, ಹಂದಿ 16,948 ಲಸಿಕೆ ಹಾಕಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ 49,899, ವೀರಾಜಪೇಟೆ 36,541, ಮಡಿಕೇರಿ 33,412. ಜಾನುವಾರುಗಳಿಗೆ ಲಸಿಕೆ ಹಾಕಲಾಗುವದು.

ಜಾನುವಾರುಗಳಿಗೆ ಲಸಿಕೆ ನೀಡಲು ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ 11 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಮಡಿಕೇರಿ 3, ಸೋಮವಾರಪೇಟೆ 4 ಹಾಗೂ ವೀರಾಜಪೇಟೆ ತಾಲೂಕಿಗೆ 4 ತಂಡಗಳನ್ನು ನಿಯೋಜಿಸಲಾಗಿದೆ. ಲಸಿಕಾ ತಂಡಗಳು ಗ್ರಾಮಗಳಿಗೆ ಸಕಾಲಕ್ಕೆ ತಲುಪಲು 11 ವಾಹನ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ 3, ಸೋಮವಾರಪೇಟೆ 4 ಹಾಗೂ ವೀರಾಜಪೇಟೆ ತಾಲೂಕಿಗೆ 4 ವಾಹನ ನಿಯೋಜಿಸಲಾಗಿದೆ.

ಇಲಾಖೆಯ ಲಸಿಕಾ ತಂಡವು ಆಯಾಯ ದಿನಗಳಂದು ಭೇಟಿ ಸಂದರ್ಭದಲ್ಲಿ ಜಾನುವಾರು ಮಾಲೀಕರು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಕಾಲುಬಾಯಿ ಜ್ವರ ತಡೆಗೆ ವಿಶೇಷ ಲಸಿಕೆ ನೀಡುವ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸುರೇಶ್ ತಿಳಿಸಿದರು.