ಕರಿಕೆ, ಜೂ. 1: ಭಾಗಮಂಡಲ- ಕರಿಕೆಯಿಂದ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಸಮರ್ಪಕವಾಗಿ ಗುಂಡಿಮುಚ್ಚಿ ಚರಂಡಿ ದುರಸ್ತಿ ಮಾಡದೆ ಪ್ರಯಾಣಿಕರು ಪರದಾಡುವಂತಾಗಿದೆ.
ಈ ರಸ್ತೆಯ ನಿರ್ವಹಣೆ ಮತ್ತು ಗುಂಡಿಮುಚ್ಚಲು ಲೋಕೋಪಯೋಗಿ ಇಲಾಖೆ 2017-18 ನೇ ಸಾಲಿನಲ್ಲಿ 16 ಲಕ್ಷ ರೂಪಾಯಿಗಳ ಟೆಂಡರನ್ನು ಕುಶಾಲನಗರ ಮೂಲದ ಗುತ್ತಿಗೆದಾರರೊಬ್ಬರಿಗೆ ನೀಡಿದ್ದು, ನಿಬಂಧನೆಗಳ ಪ್ರಕಾರ ಮಳೆಗಾಲದಲ್ಲಿ ಕಾಡು ಕಡಿದು, ಚರಂಡಿ ನಿರ್ಮಾಣ ಮಾಡಿ, ಬರೆ ಕುಸಿತದಿಂದಾಗಿ ರಸ್ತೆ ಬದಿಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ, ಡಾಮರು ಬಳಸಿ ರಸ್ತೆ ಗುಂಡಿ ಮುಚ್ಚಬೇಕಾಗಿದೆ. ಆದರೆ ಗುತ್ತಿಗೆದಾರ ಕಾಟಚಾರಕ್ಕೆ ಕಳಪೆಯಾಗಿ ಗುಂಡಿ ಮುಚ್ಚಿದ್ದು, ಮಾರ್ಚ್ ಅಂತ್ಯಕ್ಕೆ ಕಾಮಗಾರಿ ತರಾತುರಿಯಲ್ಲಿ ಮುಗಿಸಿದ್ದು ಚರಂಡಿ ಮತ್ತು ಬರೆ ಕುಸಿತದಿಂದ ರಸ್ತೆಗೆ ಅಡ್ಡಲ್ಲ್ಲಾಗಿ ಬಿದ್ದಿರುವ ಮಣ್ಣು, ಮರಗಳನ್ನು ತೆರವುಗೊಳಿಸದೆ ಪ್ರಯಾಣಕ್ಕೆ ಅಡಚಣೆಯಾಗುತ್ತಿದೆ. ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಚರಂಡಿ ಮಾಡಿಸುತ್ತೇವೆ ಎಂಬ ಹಾರಿಕೆಯ ಉತ್ತರ ಬರುತ್ತಿದ್ದು ಇದೀಗ ಮಳೆಗಾಲ ಆರಂಭದ ಲಕ್ಷಣಗಳು ಗೋಚರಿಸುತ್ತಿದ್ದರೂ ಇನ್ನೂ ಕೂಡ ಕೆಲಸ ಪೂರ್ಣಗೊಳ್ಳದಿರುವದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಮಳೆಗಾಲದಲ್ಲಿ ಗ್ರಾಮಸ್ಥರು ಇಲಾಖೆಯ ಮೇಲೆ ಕಾಡು ಕಡಿಯುವಂತೆ ಒತ್ತಡ ಹೇರಿ ಟೆಂಡರ್ ಪೂರ್ವದಲ್ಲಿ ಕರಿಕೆಯ ಗುತ್ತಿಗೆದಾರರೊಬ್ಬರು ಸುಮಾರು ಎರಡುವರೆ ಲಕ್ಷ ವೆಚ್ಚ ಮಾಡಿ ಕಾಡು ಕಡಿದು ಸುಣ್ಣ-ಬಣ್ಣ ಬಳಿದಿದ್ದರು. ಇದೀಗ ಗುತ್ತಿಗೆಯನ್ನು ಕುಶಾಲನಗರ ಮೂಲದವರು ಪಡೆದುಕೊಂಡಿದ್ದು ಇಲಾಖೆಯ ಹಿರಿಯ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಂಡು ಕಾಮಗಾರಿ ನಿರ್ವಹಿಸಿ ಹಣ ಕಳೆದುಕೊಂಡ ಸ್ಥಳೀಯ ಗುತ್ತಿಗೆದಾರನಿಗೆ ಹಣ ಪಾವತಿ ಮಾಡಿ ಕಳಪೆ ಕೆಲಸ ಮಾಡಿದ ಗುತ್ತಿಗೆದಾರನಿಂದ ಪುನಃ ಚರಂಡಿ ಮಾಡಿಸಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
- ಹೊದ್ದೆಟ್ಟಿ ಸುಧೀರ್