ಕೂಡಿಗೆ, ಜೂ. 1: ಕೂಡುಮಂಗಳೂರು ರಾಮಲಿಂಗೇಶ್ವರ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ 14 ಗ್ರಾಮ ಹಾಗೂ ಮೂರು ಗ್ರಾಮ ಪಂಚಾಯಿತಿಯ ರೈತರಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಸಹಕಾರ ಸಂಘದಲ್ಲಿ ರೈತರಿಗೆ ಬೇಕಾಗುವಂತಹ ಬಿತ್ತನೆ ಬೀಜ ಹಾಗೂ ವಿವಿಧ ಕಂಪೆನಿಗಳ ರಸಗೊಬ್ಬರಗಳನ್ನು ದಾಸ್ತಾನು ಇಡಲಾಗಿದೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೂಡುಮಂಗಳೂರು ಸಹಕಾರ ಬ್ಯಾಂಕಿನ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಹೇಳಿದರು.

ಸಂಘದ ಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಕೃಷಿ ಇಲಾಖೆಯ ಸಹಯೋಗದೊಂದಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಈ ವ್ಯಾಪ್ತಿಯ ರೈತರ ಮಣ್ಣಿಗೆ ಅನುಗುಣವಾಗಿ ಬೇಡಿಕೆ ಇದ್ದ ಗೊಬ್ಬರಗಳನ್ನು ನೇರವಾಗಿ ಕಂಪೆನಿಯಿಂದ ಪರವಾನಿಗೆ ಪಡೆದು ಖರೀದಿಸಿ ದಾಸ್ತಾನು ಇಡುವದರ ಮೂಲಕ ರೈತರಿಗೆ ಅನುಕೂಲ ಮಾಡಲಾಗಿದೆ.

ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಕೆಸಿಸಿ ಸಾಲವನ್ನು ರೈತರ ಜಮೀನಿಗೆ ಅನುಗುಣವಾಗಿ ನೀಡಲಾಗುತ್ತಿದೆ. ಈ ಭಾಗದ ರೈತರು ಹೆಚ್ಚು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವದರಿಂದ ಈ ಸಾಲಿನಲ್ಲಿ ಕೆಸಿಸಿ ಸಾಲವನ್ನು ಹೆಚ್ಚು ನೀಡಲಾಗಿದೆ. ಇದರ ಜೊತೆಯಲ್ಲಿ ವ್ಯಾಪಾರಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಪಿಗ್ಮಿ ಸಾಲ, ಚಿನ್ನಾಭರಣ ಸಾಲ ಹಾಗೂ ವಿವಿಧ ಸಾಲ ಸೌಲಭ್ಯಗಳು ಮತ್ತು ಸಂಘದಲ್ಲಿಯೇ ಸ್ಟ್ಯಾಂಪ್ ಪೇಪರ್(ಒಪ್ಪಂದ ಪತ್ರ)ಗಳನ್ನು ನೀಡುವ ಮೂಲಕ ರೈತರ ಪ್ರಗತಿಗೆ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹಿಸಲಾಗುವದು. ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕು. ಅಲ್ಲದೆ ಸಂಘದ ವ್ಯಾಪ್ತಿಗೆ ಒಳಪಡುವ ಮಹಿಳಾ ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ, ಹೈನುಗಾರಿಕೆ ಅಭಿವೃದ್ಧಿಗೆ ಸಹಕಾರ ನೀಡಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ನಿರ್ದೇಶಕರು ಇದ್ದರು.