ಮಡಿಕೇರಿ, ಮೇ 31: ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ ಸಂಘಗಳ ಒಕ್ಕೂಟದ ವತಿಯಿಂದ ತಾ. 3 ರಂದು ರಾಜ್ಯಾದ್ಯಂತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆಯಾಗಿದ್ದು, ಇದರ ಭಾಗವಾಗಿ ಗಾಳಿಬೀಡು ಜವಾಹರ್ ನವೋದಯದ ಹಳೇ ವಿದ್ಯಾರ್ಥಿ ಸಂಘದಿಂದ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಪದಾಧಿಕಾರಿ ದಂತ ವೈದ್ಯ ಡಾ. ಬೋಪಣ್ಣ ಕೆ.ಎಂ., 1987 ರಲ್ಲಿ ಆರಂಭಗೊಂಡ ನವೋದಯ ವಿದ್ಯಾಲಯದಿಂದ ಇಲ್ಲಿಯವರೆಗೆ 24 ತಂಡಗಳು ಶಿಕ್ಷಣ ಪಡೆದು ಹೊರ ಬಂದಿದ್ದು, ಆಯಾ ಜಿಲ್ಲೆಗಳಲ್ಲಿ ಹಳೇ ವಿದ್ಯಾರ್ಥಿಗಳು ಒಗ್ಗೂಡಿ ಶಿಬಿರವನ್ನು ಆಯೋಜಿಸಲಿದ್ದಾರೆ ಎಂದರು. ಕೊಡಗಿನಲ್ಲಿ ಸುಮಾರು 1450 ಮಂದಿ ಹಳೇ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿದ್ದಾರೆಂದು ತಿಳಿಸಿ, ಸಾರ್ವಜನಿಕರಿಗೆ ಉಪಯುಕ್ತವಾಗು ವಂತೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆಯೆಂದು ತಿಳಿಸಿದರು.

ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿÀಕಾರಿ ಪಿ. ರಾಜೇಂದ್ರ ಪ್ರಸಾದ್ ಉದ್ಘಾಟಿಸಲಿ ದ್ದಾರೆ. ಮುಖ್ಯ ಅತಿಥಿಗಳಾಗಿ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಗಾಳಿಬೀಡು ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ.ಎಂ. ಇಸಾಕ್, ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಸಂಪತ್ ಕುಮಾರ್, ಡಾ. ರವಿ ಕರುಂಬಯ್ಯ ಪಾಲ್ಗೊಳ್ಳಲಿದ್ದಾರೆ

ರಕ್ತದಾನ ಶಿಬಿರ ಕೇವಲ ನವೋದಯ ಶಾಲೆಯ ಹಳೇ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ. ಇದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದೆಂದು ಸ್ಪಷ್ಟಪಡಿಸಿ, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಹೆಚ್ಚಾಗಿರುವದನ್ನು ಗಮನಿಸಿ ಆಯೋಜಿಸಿರುವ ರಕ್ತದಾನ ಶಿಬಿರದ ಮೂಲಕ 50 ಯೂನಿಟ್‍ಗೂ ಹೆಚ್ಚಿನ ರಕ್ತವನ್ನು ಸಂಗ್ರಹಿಸಿ, ನಗರದಲ್ಲಿರುವ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ನೀಡಲಾಗುವದೆಂದು ಡಾ. ಬೋಪಣ್ಣ ಮಾಹಿತಿ ನೀಡಿದರು.

ಗಾಳಿಬೀಡು ನವೋದಯ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಪಿ. ಪೊನ್ನಣ್ಣ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪಿ.ಆರ್. ನವೀನ್, ಸುಬ್ರಮಣ್ಯ ಹೆಚ್.ಎ., ಸದಸ್ಯರಾದ ಕೆ.ಎಸ್. ರಮೇಶ್ ಉಪಸ್ಥಿತರಿದ್ದರು.