ಕುಶಾಲನಗರ, ಮೇ 31: ಕುಶಾಲನಗರದಲ್ಲಿ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜೂನ್ 11 ರಂದು ನಾಡಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಲು ಪಟ್ಟಣದ ಹಿತರಕ್ಷಣಾ ವೇದಿಕೆ ಪ್ರಮುಖರು ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತೀವ್ರ ಚರ್ಚೆ ಬಳಿಕ ಕಾಮಗಾರಿಗೆ ಹಿಡಿದಿರುವ ಗ್ರಹಣ ನಿವಾರಿಸಲು ಹೋರಾಟ ರೂಪಿಸುವ ಕುರಿತು ವೇದಿಕೆ ಪ್ರಮುಖರು ಚರ್ಚೆ ನಡೆಸಿದರು.
ಕಳೆದ 4 ವರ್ಷಗಳ ಹಿಂದೆ 50 ಕೋಟಿ ರೂ ವೆಚ್ಚದಲ್ಲಿ ಆರಂಭಗೊಂಡ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. 4 ವರ್ಷ ಕಳೆದರೂ ಯೋಜನೆ ಪೂರ್ಣಗೊಳಿಸುವಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತ ವಿಫಲಗೊಂಡಿದೆ. ವಿವಾದಿತ ಸಂಸ್ಕರಣಾ ಘಟಕದ ಜಾಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಯಾವದೇ ಪ್ರಯೋಜನ ಉಂಟಾಗಿಲ್ಲ. ಈ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ನಿಯೋಗ ಮೂಲಕ ಭೇಟಿ ಮಾಡಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಒತ್ತಾಯಿಸಲಾಗುವದು. ವಿಳಂಬ ಉಂಟಾದಲ್ಲಿ ಹೋರಾಟ ಕೈಗೊಳ್ಳುವ ಬಗ್ಗೆ ಮನವರಿಕೆ ಮಾಡುವ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಹಾಗೂ ರಾಜಕೀಯ ಪಕ್ಷಗಳ ಪ್ರಮುಖರು ಸಭೆಯಲ್ಲಿ ಚರ್ಚೆ ನಡೆಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಸಂಸ್ಥೆಗಳ ಪ್ರಮುಖರಾದ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಕೆ.ಎಸ್ .ನಾಗೇಶ್, ವಿ.ಎಸ್. ಆನಂದಕುಮಾರ್, ಎಂ.ಎಸ್. ರಾಜೇಶ್, ವೆಂಕಟೇಶ್ ಪೂಜಾರಿ, ಶಿವಾಜಿ, ಡಿ.ಎಸ್. ರಾಜೇಶ್, ಚಂದ್ರಶೇಖರ್, ಚಂದ್ರು, ಸಂತೋಷ್, ಎಂ.ಕೃಷ್ಣ ಮತ್ತಿತರರು ಇದ್ದರು.