ಮಡಿಕೇರಿ, ಮೇ 31: ಪ್ರಸ್ತುತ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆ ಶೇ.98 ರಷ್ಟು ಸಾಧನೆ ಮಾಡಿದ್ದು, ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಶಿಕ್ಷಕರನ್ನು ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಘಟಕದ ವತಿಯಿಂದ ಜೂ.8 ರಂದು ಸನ್ಮಾನಿಸಲಾಗುವದೆಂದು ಸಂಘಟನೆಯ ತಾಲೂಕು ಸಂಘಟನಾ ಸಂಚಾಲಕ ಎ.ಪಿ.ದೀಪಕ್ ತಿಳಿಸಿದ್ದಾರೆ.

ಶಾಲಾ ಆವರಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಚಂದ್ರಶೇಖರ್ ಉದ್ಘಾಟಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಪ್ರಾಸ್ತವಿಕವಾಗಿ ಮಾತನಾಡಲಿದ್ದು, ಪ್ರಗತಿಪರ ರೈತರಾದ ಮಂದ್ರೀರ ತೇಜಸ್ ನಾಣಯ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕ ಕೆ.ಎ.ರಾಮಚಂದ್ರ, ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪೈಕೇರ ಮನೋಹರ್ ಮಾದಪ್ಪ, ದಾನಿಗಳು ಹಾಗೂ ತಾ.ಪಂ. ಮಾಜಿ ಸದಸ್ಯ ಸಾಬುತಿಮ್ಮಯ್ಯ, ಚೆಟ್ಟಳ್ಳಿಯ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ ಎಂದು ದೀಪಕ್ ತಿಳಿಸಿದ್ದಾರೆ.