ಸೋಮವಾರಪೇಟೆ, ಮೇ 31: ಪಟ್ಟಣದಲ್ಲಿ ಸಂಚಾರ ಅವ್ಯವಸ್ಥೆ ಮಿತಿಮೀರುತ್ತಿದೆ. ಇಕ್ಕಟ್ಟಿನ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವದರಿಂದ ಅನ್ಯ ವಾಹನಗಳ ಓಡಾಟಕ್ಕೆ ತೊಂದರೆ ಎದುರಾಗುತ್ತಿದೆ.
ಇಲ್ಲಿನ ಬಸವೇಶ್ವರ ದೇವಸ್ಥಾನ ರಸ್ತೆ, ಮುಖ್ಯ ರಸ್ತೆ, ತ್ಯಾಗರಾಜ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆಗಳಲ್ಲಿ ಆಗಿಂದಾಗ್ಗೆ ಸಂಚಾರ ನಿಯಮಗಳು ಉಲ್ಲಂಘನೆಯಾಗುತ್ತಿದೆ. ಇದರೊಂದಿಗೆ ಬಾರ್ ಮತ್ತು ರೆಸ್ಟೋರೆಂಟ್ಗಳಿರುವ ಸ್ಥಳಗಳಲ್ಲಿ ವಾಹನ ಸಂಚಾರ ಅಡ್ಡಾದಿಡ್ಡಿಯಾಗಿ ನಿಲುಗಡೆಗೊಳ್ಳುತ್ತಿರುವದರಿಂದ ಇತರ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹಲವಷ್ಟು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣೆಗೆ ಒಳಪಡುವ ಗೃಹರಕ್ಷಕ ದಳದ ಸಿಬ್ಬಂದಿಗಳು ವಾಹನ ಸಂಚಾರ, ನಿಲುಗಡೆಯನ್ನು ಸುವ್ಯವಸ್ಥೆಗೊಳಿಸಲು ಶ್ರಮಿಸುತ್ತಿದ್ದರೂ ಸಹ, ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಕ್ಲಬ್ ರಸ್ತೆಗಳಿಗಷ್ಟೇ ಸೀಮಿತವಾಗಿದ್ದಾರೆ. ಮೇಲಿನ ಪೆಟ್ರೋಲ್ ಬಂಕ್ನಿಂದ ಸೋಮೇಶ್ವರ ದೇವಾಲಯದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯಾಗುತ್ತಿರುವದರಿಂದ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಇದರೊಂದಿಗೆ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗಿದ್ದು, ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನ ನಿಲುಗಡೆಗೊಳಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯೊಂದಿಗೆ ವ್ಯವಹರಿಸಿ ಪಟ್ಟಣದ ಸಂಚಾರ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.