ಸೋಮವಾರಪೇಟೆ, ಮೇ 29: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ನಿನ್ನೆ ದಿನ ಬಂದ್ ನಡೆದಿದ್ದರಿಂದ ಇಂದು ಪಟ್ಟಣದಲ್ಲಿ ಜನಸಂದಣಿ ಹೆಚ್ಚು ಕಂಡುಬಂತು. ಸೋಮವಾರಪೇಟೆಯ ಸಂತೆ ಸುತ್ತಮುತ್ತಲಿನ ಭಾಗಗಳಿಗೆ ಹೋಲಿಸಿದರೆ ದೊಡ್ಡ ಸಂತೆ ಎಂಬ ಹೆಸರು ಪಡೆದಿದ್ದು, ನಿನ್ನೆಯ ಬಂದ್‍ನಿಂದ ಅರೆಬರೆ ವಹಿವಾಟು ನಡೆದಿತ್ತು.

ಬಂದ್‍ನಿಂದಾಗಿ ಹಲವಷ್ಟು ಮಂದಿ ಮನೆ ಬಿಟ್ಟು ಪಟ್ಟಣದತ್ತ ಸುಳಿಯದೇ ಇದ್ದುದರಿಂದ ಸೋಮವಾರವಾದರೂ ಪಟ್ಟಣದಲ್ಲಿ ಜನ ಕಂಡುಬರಲಿಲ್ಲ. ಇಂದು ಬೆಳಗ್ಗಿನಿಂದಲೇ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟ ಅಧಿಕವಾಗಿತ್ತು. ವಾರದ ಸಾಮಗ್ರಿಗಳನ್ನು ಖರೀದಿಸುವಲ್ಲಿ ಜನತೆ ‘ಬ್ಯುಸಿ’ಯಾಗಿದ್ದರು.

ತರಕಾರಿ ಮತ್ತು ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡುಬಂದರು. ನಿನ್ನೆಯ ಬಂದ್ ಸಂದರ್ಭ ಭಣಗುಡುತ್ತಿದ್ದ ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಆವರಣ ಇಂದು ಸಾರ್ವಜನಿಕರ ಚಟುವಟಿಕೆಯ ಕೇಂದ್ರವಾಗಿತ್ತು. ತರಕಾರಿ ಅಂಗಡಿಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಉತ್ತಮ ವ್ಯಾಪಾರ ನಡೆಯಿತು.