ಮಡಿಕೇರಿ, ಮೇ 29: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಪ್ರತಿಷ್ಠಿತ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆಯೊಂದಿಗೆ, ಉತ್ತಮ ರೀತಿಯಲ್ಲಿ ಪೂಜಾದಿ ಸೇವೆಗಳು ಲಭಿಸುವಂತೆ ಗಮನಹರಿಸಲಾಗುವದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅವರು ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿ, ನಿತ್ಯ ಪೂಜಾದಿಗಳಲ್ಲಿ ಭಕ್ತರಿಗೆ ಸನ್ನಿಧಿಯಿಂದ ನೆಮ್ಮದಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವದು ಎಂದರು.
ಶೀಘ್ರವೇ ದೇವಾಲಯದ ಅಧಿಕಾರಿ ಸಮ್ಮುಖ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವದು ಎಂದ ಅವರು, ಪಾವಿತ್ರ್ಯತೆ ಹಾಗೂ ಪೂಜಾದಿಗಳನ್ನು ಸರಿಯಾದ ಕ್ರಮದಲ್ಲಿ ನಡೆಸುವಂತೆ ವ್ಯವಸ್ಥೆ ರೂಪಿಸಲು ಮುಂದಾಗಿರುವದಾಗಿ ನುಡಿದರಲ್ಲದೆ, ಬೇಕು-ಬೇಡಿಕೆಗಳ ಪಟ್ಟಿ ಸಿದ್ಧಗೊಳಿಸಲು ಸೂಚಿಸಿರುವದಾಗಿ ವಿವರಿಸಿದರು.
ಶ್ರೀ ಓಂಕಾರೇಶ್ವರನಿಗೆ ಭಕ್ತರಿಂದ ರುದ್ರಾಭಿಷೇಕ ಸೇವೆ, ಸಂಕಲ್ಪದಿಂದ ಪೂಜಾ ಕ್ರಮ, ರುದ್ರಪಠನ, ಪರ್ವಕಾಲದ ಸೇವೆಗಳಿಗೆ ಒತ್ತು ನೀಡಲು ಪ್ರಯತ್ನ ನಡೆದಿದೆ ಎಂದ ಅವರು, ಈ ಬಗ್ಗೆ ಸದ್ಭಕ್ತರು, ಹಿರಿಯರು, ದಾನಿಗಳ ಸಲಹೆ ಪಡೆದು ಮುಂದಡಿಯಿಡಲಾಗುವದು ಎಂಬದಾಗಿ ತಿಳಿಸಿದರು.
ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯಡಿ ಬರಲಿರುವ ಕೋಟೆ ಮಹಾ ಗಣಪತಿ, ಆಂಜನೇಯ, ಅಶ್ವತ್ಥಕಟ್ಟೆ ಸನ್ನಿಧಿಗಳಲ್ಲಿ ನಿತ್ಯ ಪೂಜೆಗಳು ಹಾಗೂ ವಾರ್ಷಿಕ ಉತ್ಸವಗಳ ಸಂಬಂಧ ಸರಿಯಾದ ಕ್ರಮದಲ್ಲಿ ಸೇವೆಗಳನ್ನು ನಿರ್ವಹಿಸಲು ಒತ್ತು ನೀಡಲಿರುವದಾಗಿ ಜಗದೀಶ್ ಸ್ಪಷ್ಟಪಡಿಸಿದರು.
ದೇವಾಲಯದ ಆರ್ಥಿಕ ವ್ಯವಸ್ಥೆ ನೋಡಿಕೊಂಡು, ಅನವಶ್ಯಕ ಖರ್ಚು ಗಳಿಗೆ ಕಡಿವಾಣ ಹಾಕುವದರೊಂದಿಗೆ, ಅರ್ಚಕ ಸಿಬ್ಬಂದಿಯ ಕೊರತೆ ನೀಗಿಸುವದು ಸೇರಿದಂತೆ ಮೂಲ ಭೂತ ಸೌಕರ್ಯ ಒದಗಿಸಲು ಸರಕಾರ ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆಯುವದಾಗಿ ಆಶಯ ವ್ಯಕ್ತಪಡಿಸಿದರು.
ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ ದೀರ್ಘ ಕಾಲದಿಂದ ಬ್ರಹ್ಮಕಲಶೋತ್ಸವ ಇತ್ಯಾದಿ ನಡೆಯದಿರುವದು ಗಮನಕ್ಕೆ ಬಂದಿದೆ ಎಂದ ಅವರು, ಭವಿಷ್ಯದಲ್ಲಿ ಆ ಬಗ್ಗೆ ಗಮನಹರಿಸಲಾಗುವದು ಎಂದು ನುಡಿದರು. ದೇವಾಲಯಕ್ಕೆ ಬರುವ ಪ್ರವಾಸಿಗಳಿಗೆ ವಸ್ತ್ರ ಸಂಹಿತೆ ಇತ್ಯಾದಿಗೆ ಒತ್ತು ನೀಡುವದು ಸೇರಿದಂತೆ ಕೇರಳ ಮಾದರಿ ನಿಯಮ ಪಾಲನೆಗೆ ವ್ಯವಸ್ಥೆ ಕಲ್ಪಿಸಲು ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ನೂತನ ಅಧ್ಯಕ್ಷರು ಮಾಹಿತಿ ನೀಡಿದರು.