ವೀರಾಜಪೇಟೆ, ಮೇ 29: ರಾಜಕಾರಣಿಗಳು ನಿರ್ದಿಷ್ಟ ಸಮುದಾಯಗಳನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿರುವದು ವಿಷಾದನೀಯ ಎಂದು ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಹೇಳಿದ್ದಾರೆ.

ಅರಮೇರಿಯ ಕಳಂಚೇರಿ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವೀರಾಜಪೇಟೆ ತಾಲೂಕು ಘಟಕದ ವಾರ್ಷಿಕ ಮಹಾಸಭೆಯ ಸಂದರ್ಭ ಏರ್ಪಡಿಸಲಾಗಿದ್ದ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಸಮುದಾಯದ ಮಠಗಳು ಗರಿಷ್ಠ ಸಮಾಜಮುಖಿಯಾಗಬೇಕು. ಜನರ ಸರ್ವತೋಮುಖ ಕಲ್ಯಾಣಗಳು ಮಠದ ಮೂಲಕ ನಡೆಯಬೇಕು. ಸರ್ವರ ಆರೋಗ್ಯ, ಶಿಕ್ಷಣ, ಸಾಮಾಜಿಕ, ಕೌಟುಂಬಿಕ ಹಾಗೂ ರಾಜಕೀಯ ಸಮಸ್ಯೆಗಳ ಪರಿಹಾರ ಮಠಗಳ ಮೂಲಕ ನೆರವೇರಬೇಕು. ಮಠಗಳು ಸಂಬಂಧಗಳ ಸರಮಾಲೆ ಹೆಣೆದು ಸಂತೋಷ ಮತ್ತು ಸಮೃದ್ಧಿಯನ್ನು ಬೆಳೆಸುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಸಂಬಂಧಗಳನ್ನು ಬೆಸೆಯುವಲ್ಲಿ ಮಠಗಳು ಮಹತ್ತರ ಪಾತ್ರವನ್ನು ವಹಿಸಿವೆ. ಸಮಾಜದ ಹಿರಿಯರು ಮುಂದಿನ ಪೀಳಿಗೆಗೆ ಮಾದರಿ ಯಾದಲ್ಲಿ ಕಿರಿಯರಿಗೆ ಮಾರ್ಗದರ್ಶ ನದ ಅಭಾವವಿರುವದಿಲ್ಲ ಎಂದರು.

ಮಠಾಧಿಪತಿ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ಎನ್. ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ ಉದ್ಘಾಟನೆ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ಉಪಾಧ್ಯಕ್ಷ ಎಸ್.ಎಸ್. ಸುರೇಶ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜ್ ಮಾತನಾಡಿದರು. ರಾಜೇಂದ್ರ ಪ್ರಸಾದ್ ಸ್ವಾಗತಿಸಿ, ಜಗದೀಶ್ ವಂದಿಸಿ, ಸುರಭಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವೀರಶೈವ ಸಮಾಜದ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.