ಶನಿವಾರಸಂತೆ, ಮೇ 29: ಮೇ ತಿಂಗಳಲ್ಲಿ ಸುರಿದ ಸಾಧಾರಣ ಮಳೆ ಹಾಗೂ ಎರಡು-ಮೂರು ದಿನಗಳಿಂದ ರಾತ್ರಿ ಬೀಳುತ್ತಿರುವ ಹದವಾದ ಮಳೆಗೆ ಸಮೀಪದಲ್ಲೇ ಹರಿವ ಕಾಜೂರು ಹೊಳೆಯಲ್ಲಿ ಮತ್ತೆ ನೀರಾಗಿದೆ.

ವರ್ಷವಿಡೀ ತುಂಬಿ ಹರಿಯುವ ಕಾಜೂರು ಹೊಳೆ ಈ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಬರಿದಾಗಿ ಈ ವಿಭಾಗದ ರೈತರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಕಳೆದ ಐದಾರು ವರ್ಷಗಳಿಂದ ವಾರ್ಷಿಕ ಮಳೆ ಪ್ರಮಾಣ ಕುಸಿಯುತ್ತಿರುವದೇ ಹೊಳೆ ನೀರು ಸಂಪೂರ್ಣ ಬತ್ತಿ ಹೋಗಲು ಕಾರಣ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೂಜಗೇರಿ, ಖ್ಯಾತೆ, ನೆರೆಯ ಹಾಸನ ಜಿಲ್ಲೆಯ ಯಸಳೂರು ಇತ್ಯಾದಿ ಗ್ರಾಮಗಳ ರೈತರ, ಗ್ರಾಮಸ್ಥರ ಜೀವನದಿ ಕಾಜೂರು ಹೊಳೆ. ಈ ಹೊಳೆಯನ್ನು ನಂಬಿ ನೂರಾರು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ 3 ವಾರಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಕಾಜೂರು ಹೊಳೆಯಲ್ಲಿ ಸ್ವಲ್ಪ ನೀರಾಗಿದ್ದು ಬೆಳೆದ ಬೆಳೆಗೆ ಪೈಪ್ ಮೂಲಕ ನೀರು ಹಾಯಿಸಲು ಅಡ್ಡಿಯಿಲ್ಲ ಎಂದು ರೈತರು ನೆಮ್ಮದಿಯ ನಿಟ್ಟುಸಿರು ಚೆಲ್ಲಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಜೂರು ಹೊಳೆಯನ್ನು ನಂಬಿ ರೈತರು 200 ಹೆಕ್ಟೇರ್‍ನಲ್ಲಿ ಹಸಿರು ಮೆಣಸಿನಕಾಯಿ, ಶುಂಠಿ, ಬಾಳೆ, ತರಕಾರಿ ಮುಂತಾದ ಕೃಷಿ ಮಾಡಿದ್ದಾರೆ. 250 ಎಕರೆಯಷ್ಟು ಕಾಫಿ ತೋಟಗಳಿಗೆ ಬೇಸಿಗೆಯಲ್ಲಿ ನೀರನ್ನು ಹಾಯಿಸುತ್ತಾರೆ. ಕಾಜೂರು ಹೊಳೆ ಸುಮಾರು 50 ಕಿ.ಮೀ. ಹರಿಯುತ್ತದೆ. ಸೋಮವಾರಪೇಟೆ ತಾಲೂಕಿನ ಪಶ್ಚಿಮಘಟ್ಟ ಬೆಟ್ಟ ಸಾಲಿನ ಪುಷ್ಪಗಿರಿ ಬೆಟ್ಟದ ತಪ್ಪಲಿನ ತೋಳೂರುಶೆಟ್ಟಳ್ಳಿ, ಕಾಡ್ಲಮನೆ ಬೆಟ್ಟದಲ್ಲಿ ಹುಟ್ಟಿ ಹರಿದು ಕೂತಿ, ಕುಂದಳ್ಳಿ ಗ್ರಾಮಗಳ ಮೂಲಕ ದುಂಡಳ್ಳಿ, ಕಾಜೂರು ಗ್ರಾಮದಲ್ಲಿ ಹರಿಯುತ್ತದೆ. ಅಲ್ಲಿಂದ ಕೊಡ್ಲಿಪೇಟೆ ಸಮೀಪದ ಕೊಡಗು - ಹಾಸನ ಗಡಿಭಾಗದ ಗ್ರಾಮಗಳ ಮೂಲಕ ಹೇಮಾವತಿ ನದಿಯನ್ನು ಸೇರಿಕೊಳ್ಳುತ್ತದೆ.