ಕುಶಾಲನಗರ, ಮೇ 29: ಕುಶಾಲನಗರ ಪಟ್ಟಣದಲ್ಲಿ ಲಾಡ್ಜ್ ಒಂದರಿಂದ ಶೌಚಾಲಯ ತ್ಯಾಜ್ಯ ಚರಂಡಿ ಮೂಲಕ ನದಿಗೆ ಹರಿಸಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ಲಾಡ್ಜ್ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ ಪ್ರಕರಣ ನಡೆದಿದೆ. ಸ್ಥಳೀಯರ ದೂರಿನ ಹಿನ್ನೆಲೆ ಕುಶಾಲನಗರದ ಬೈಪಾಸ್ ರಸ್ತೆಯ ಪೂರ್ಣಶ್ರೀ ಲಾಡ್ಜ್‍ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಧಾಳಿ ನಡೆಸಿ ಪರಿಶೀಲನೆ ಕೈಗೊಂಡಾಗ ತ್ಯಾಜ್ಯಗಳನ್ನು ನೇರವಾಗಿ ಚರಂಡಿಗೆ ಹರಿಸುತ್ತಿರುವ ದೃಶ್ಯ ಕಂಡುಬಂದಿದೆ. ದಿನನಿತ್ಯ ಈ ವ್ಯಾಪ್ತಿಯ ನಾಗರಿಕರು ವಾಸನಾಯುಕ್ತ ವಾತಾವರಣದಲ್ಲಿ ಕಾಲ ಕಳೆಯಬೇಕಾಗಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗೆ ಲಿಖಿತ ದೂರು ನೀಡಲಾಗಿತ್ತು ಎಂದು ಸ್ಥಳೀಯ ನಿವಾಸಿ ರಂಗಸ್ವಾಮಿ ತಿಳಿಸಿದ್ದಾರೆ.

ಪಂಚಾಯಿತಿ ಕಂದಾಯ ನಿರೀಕ್ಷಕ ಸದಾಶಿವಮೂರ್ತಿ, ದಫೇದಾರ್ ಮೋಹನ್ ಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಈ ಬಗ್ಗೆ ವರದಿ ನೀಡಿದ ಹಿನ್ನೆಲೆ ಲಾಡ್ಜ್ ಮಾಲೀಕರಿಗೆ ರೂ. 5 ಸಾವಿರ ದಂಡ ಹಾಗೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇದೇ ರೀತಿ ಪುನರಾವರ್ತನೆಗೊಂಡಲ್ಲಿ ವಸತಿಗೃಹಕ್ಕೆ ಬೀಗ ಜಡಿಯುವದರೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.