ಮಡಿಕೇರಿ, ಮೇ 29: ಪ್ರಸಕ್ತ ಸಾಲಿನಲ್ಲಿ ಬೇಸಿಗೆಯ ಅವಧಿ ಪೂರ್ಣಗೊಂಡಂತಾಗಿದ್ದು, ರಾಜ್ಯಕ್ಕೆ ಇನ್ನೆರಡು ದಿನದಲ್ಲಿ ಮುಂಗಾರು ಮಳೆ ಪ್ರವೇಶಿಸುವ ನಿರೀಕ್ಷೆಯಿದೆ. ಕೇರಳದಲ್ಲಿ ಮುಂಗಾರು ಆರಂಭಗೊಂಡಿದ್ದು, ಇದನ್ನು ಖಚಿತಪಡಿಸಿರುವ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ಆರಂಭಗೊಳ್ಳಲಿರುವದಾಗಿ ಮುನ್ಸೂಚನೆ ನೀಡಿದ್ದಾರೆ.ಮಳೆಗಾಲಕ್ಕೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಸುರಿಯುತ್ತಿದ್ದ ಮಳೆ ಇದೀಗ ಮುಂಗಾರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಯಲಿರುವದರಿಂದ ನೈಜ ಮಳೆಗಾಲದ ಚಿತ್ರಣ ಆರಂಭಗೊಳ್ಳಲಿದೆ. ಈತನಕ ವಿವಿಧ ಕ್ರೀಡಾಕೂಟಗಳು, ಸಮಾರಂಭಗಳಲ್ಲಿ ಜಿಲ್ಲೆಯ ಜನರು ತಲ್ಲೀನರಾಗಿದ್ದರು. ಶಾಲಾ ವಿದ್ಯಾರ್ಥಿಗಳ ರಜೆಯ ಸಂಭ್ರಮವೂ ಮುಗಿದಿದ್ದು, ಈಗಾಗಲೇ ಶಾಲೆಗಳು ಆರಂಭಗೊಂಡಿವೆ. ಇದೀಗ ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬರೂ ಮಳೆಗಾಲದ ಸನ್ನಿವೇಶಕ್ಕೆ ಒಗ್ಗಬೇಕಾದ ಅನಿವಾರ್ಯತೆ ಎದುರಾಗಿದೆ.ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಸಿದ್ಧತೆಗಳು, ಕಾಫಿ ತೋಟಗಳಿಗೆ ಗೊಬ್ಬರ ಹಾಕುವದು, ಮನೆಗಳ ದುರಸ್ತಿ ಕಾರ್ಯ, ಚರಂಡಿ ಸರಿಪಡಿಸುವದು ಮತ್ತಿತರ ಕಾರ್ಯಗಳಲ್ಲಿ ಜನರು ಇದೀಗ ಕಾರ್ಯತತ್ಪರರಾಗುತ್ತಿದ್ದಾರೆ.

(ಮೊದಲ ಪುಟದಿಂದ) ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಕೊಡಗಿನ ಜನರು 2018 ರ ಮಳೆಗಾಲವನ್ನು ಎದುರಿಸಲು ಸಿದ್ಧರಾಗುತ್ತಿದ್ದಾರೆ. ವಿವಿಧ ಇಲಾಖೆಗಳು ಮುಂಗಾರು ಮಳೆಯ ಸಂದರ್ಭ ಎದುರಾಗಬಹುದಾದ ಸಮಸ್ಯೆ - ಅಪಾಯಗಳನ್ನು ಸರಿಪಡಿಸಲು ಸಿದ್ಧತೆ ನಡೆಸುತ್ತಿದೆ.

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ಇಂದು ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದ್ದು, ಮುಂಗಾರು ಮಳೆ ಆರಂಭವಾದಂತೆ ಮುನ್ಸೂಚನೆ ನೀಡಿದೆ.

ಕೊಡಗು-ಕೇರಳ ಗಡಿ ಪ್ರದೇಶವಾದ ಮಾಕುಟ್ಟದಲ್ಲಿಯೂ ನಿನ್ನೆ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ಮೂರು ದಿನಗಳ ಹಿಂದೆಯೇ ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಿದ್ದು ನಂತರ ಈ ಮುಂಗಾರು ಕರ್ನಾಟಕವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಈ ಹಿಂದೆ ತಿಳಿಸಿದ್ದರು.

ತಾ. 27 ರಂದು 28.4 ಮಿ.ಮೀ. ಮಳೆಯಾಗಿದ್ದು, ತಾ. 28ರ ಬೆಳಗ್ಗಿನಿಂದ ತಾ. 29ರ ಬೆಳಗ್ಗಿನ 8 ಗಂಟೆಯ ತನಕ ಒಟ್ಟು 3.7 ಮಿ.ಮೀ. ಮಳೆ ಸುರಿದಿದೆ.

ಆಲೂರುಸಿದ್ದಾಪುರ : ಶನಿವಾರಸಂತೆ ಕೊಡ್ಲಿಪೇಟೆ ಸೇರಿದಂತೆ ಸುತ್ತಮುತ್ತ ನಿನ್ನೆ ಹಾಗೂ ಇಂದು ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ನೆಲಕ್ಕುರುಳಿವೆ. ಜಾಗೇನಹಳ್ಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ವಿದ್ಯುತ್ ತಂತಿಯ ಮೇಲೆ ಒಣ ಮರ ಬಿದ್ದುದರಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು.

ಆಲೂರುಸಿದ್ದಾಪುರ ವ್ಯಾಪ್ತಿಯ ಕಣಿವೆ ಬಸವನಹಳ್ಳಿ ಗ್ರಾಮದ ರಸ್ತೆ ಹಾಗೂ ಒಳ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯ ತುಂಬೆಲ್ಲ ನೀರು ನಿಂತಿದ್ದರಿಂದ ತುಂಬ ತೊಂದರೆ ಅನುಭವಿಸಿದರು. ಮಧ್ಯಾಹ್ನದಿಂದ ನಿಧಾನವಾಗಿ ಪ್ರಾರಂಭಗೊಂಡ ಮಳೆ ಸಂಜೆಯಾಗುತ್ತಿದ್ದಂತೆ ಜೋರಾಗಿ ಸುರಿಯಲಾರಂಭಿಸಿತು ಮಕ್ಕಳು ಶಾಲೆಯಿಂದ ಮನೆಗೆ ತೆರಳಲು ಪರದಾಡಿದರು.

ಶನಿವಾರಸಂತೆಯಿಂದ ಬಾಣಾವರ ಮುಖ್ಯ ರಸ್ತೆಯಲ್ಲಿ ಮರಗಳು ಒಣಗಿ ನಿಂತಿದ್ದು, ಇದನ್ನು ತೆರವುಗೊಳಿಸಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಯಾವದೆ ಕ್ರಮಕ್ಕೆ ಮುಂದಾಗದೆ ಇರುವದರಿಂದ ಇಂದು ರಸ್ತೆಗೆ ಅಡ್ಡಲಾಗಿ ಮರಗಳು ಬೀಳುತ್ತಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನೂ ಅನೇಕ ಮರಗಳು ರಸ್ತೆಯ ಉದ್ದಕ್ಕೂ ಒಣಗಿ ನಿಂತಿವೆ ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂದು ಸಾರ್ವಜನಿಕರು ಆಕ್ರೋಶÀ ವ್ಯಕ್ತಪಡಿಸಿದರು.