ಕುಶಾಲನಗರ, ಮೇ 26: ಕುಶಾಲನಗರ ಪಟ್ಟಣದ ಸಮರ್ಪಕ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ ನವೀನ್ ಗೌಡ ಸಮ್ಮುಖದಲ್ಲಿ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಪ್ರಮುಖರೊಂದಿಗೆ ಚರ್ಚೆ ನಡೆಯಿತು.

ಪಟ್ಟಣದ ಕನ್ನಿಕಾ ಇಂಟರ್‍ನ್ಯಾಷನಲ್ ಆವರಣದಲ್ಲಿ ನಡೆದ ಸಭೆಯಲ್ಲಿ ನಗರದ ಮುಖ್ಯರಸ್ತೆಯಲ್ಲಿ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳುವದ ರೊಂದಿಗೆ ಸಂಚಾರಿ ವ್ಯವಸ್ಥೆ ಏರುಪೇರಾಗುತ್ತಿದೆ.

ಈ ಸಂಬಂಧ ಸಭೆಯಲ್ಲಿ ಸಲಹೆ ಸೂಚನೆಗಳನ್ನು ಪಡೆಯಲಾಯಿತು ಎಂದು ಸಂಚಾರಿ ಪೊಲೀಸ್ ಅಧಿಕಾರಿ ನವೀನ್ ಗೌಡ ತಿಳಿಸಿದ್ದಾರೆ.

ಸಮರ್ಪಕ ಸಂಚಾರಿ ವ್ಯವಸ್ಥೆಗೆ ಪಟ್ಟಣದ ಕೆಲವೆಡೆ ಏಕಮುಖ ರಸ್ತೆ ಸಂಚಾರಕ್ಕೆ ಕ್ರಮ, ಆಟೋ ರಿಕ್ಷಾ ನಿಲುಗಡೆ, ಪಾದಾಚಾರಿ ಮಾರ್ಗ, ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ, ಬೀದಿ ಬದಿ ವ್ಯಾಪಾರಿಗಳ ತೆರವು, ಹೆದ್ದಾರಿ ರಸ್ತೆ ಬದಿಯಲ್ಲಿ ಪ್ರವಾಸಿಗರ ವಾಹನ ನಿಲುಗಡೆ ಮತ್ತಿತರ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲಾಯಿತು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಭಿಯಂತರರಾದ ಶ್ರೀದೇವಿ, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ಪಿ.ಕೆ. ಜಗದೀಶ್, ಮಾಜಿ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರ ಪ್ರಸಾದ್, ಟಿ.ಆರ್. ಶರವಣಕುಮಾರ್, ಪಿ.ಪಿ. ಸತ್ಯನಾರಾಯಣ, ಎಂ.ಕೆ. ದಿನೇಶ್ ಮತ್ತಿತರ ಪದಾಧಿಕಾರಿಗಳು ಇದ್ದರು.