ಮಡಿಕೇರಿ, ಮೇ 26: ಕೊಡವ ಕುಟುಂಬಗಳ ನಡುವೆ ನಡೆದುಕೊಂಡು ಬರುತ್ತಿರುವ ಕೌಟುಂಬಿಕ ಕ್ರಿಕೆಟ್ ಉತ್ಸವ ಇದೇ ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಯೋಜನೆಗೊಂಡಿದೆ. 19ನೇ ವರ್ಷದ ಉತ್ಸವವನ್ನು ಮಡ್ಲಂಡ ಕುಟುಂಬಸ್ಥರು ಆಯೋಜಿಸಿದ್ದು, ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾಟದ ಫೈನಲ್ ತಾ. 27ರಂದು (ಇಂದು) ಜರುಗಲಿದೆ. ಪ್ರತಿಷ್ಠಿತ ಮಡ್ಲಂಡ ಕಪ್‍ಗಾಗಿ ಕಳೆದ ಬಾರಿಯ ಚಾಂಪಿಯನ್ ಕಳಕಂಡ ಹಾಗೂ ಇದೇ ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸಿರುವ ತಂಬುಕುತ್ತಿರ ಕುಟುಂಬ ತಂಡಗಳು ಸೆಣಸಲಿದೆ.1997ರಲ್ಲಿ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊಂಡ ಬಳಿಕ 2000ನೇ ಇಸವಿಯಲ್ಲಿ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ಕೌಟುಂಬಿಕ ಕ್ರಿಕೆಟ್ ಉತ್ಸವವನ್ನು ಹುಟ್ಟು ಹಾಕಿದ್ದು, ವೀರಾಜಪೇಟೆ, ಪೊನ್ನಂಪೇಟೆ, ಬಾಳೆಲೆ, ನಾಪೋಕ್ಲು, ಮಾದಾಪುರದಲ್ಲಿ ಪಂದ್ಯಾವಳಿಯನ್ನು ವರ್ಷಂಪ್ರತಿ ವಿವಿಧ ಕುಟುಂಬಗಳು ಆಯೋಜಿಸಿಕೊಂಡು ಬಂದಿವೆ.

ಇಲ್ಲಿಯ ತನಕ : ಈ ತನಕ ಬಲ್ಲಚಂಡ ಕುಟುಂಬ 2 ಬಾರಿ, ಮಣವಟ್ಟಿರ ತಂಡ ಎರಡು ಬಾರಿ, ಮಾತಂಡ ತಂಡ ಒಂದು ಬಾರಿ,

(ಮೊದಲ ಪುಟದಿಂದ) ಕಾಣತಂಡ ಕುಟುಂಬ 5 ಬಾರಿ, ಚೆಕ್ಕೇರ ತಂಡ 6 ಬಾರಿ ಈ ಪ್ರಶಸ್ತಿಗಳಿಸಿವೆ. ಚೆಕ್ಕೇರ ತಂಡ ಮೂಕೋಂಡ ತಂಡದೊಂದಿಗೆ ಒಂದು ಬಾರಿ ಜಂಟಿ ವಿಜೇತ ತಂಡವಾಗಿಯೂ ಹೊರಹೊಮ್ಮಿದೆ. ಚೆಕ್ಕೇರ ತಂಡ 2013 ರಿಂದ ಸತತ ನಾಲ್ಕು ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ವಿಶೇಷ. 2017ರಲ್ಲಿ ಕಳಕಂಡ ತಂಡ ಪ್ರಥಮ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದ್ದು, ಈ ಬಾರಿಯೂ ಫೈನಲ್ ಪ್ರವೇಶಿಸಿದೆ.

ಚಾಮೆರ ಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ಪರಾಭವಗೊಂಡಿದ್ದ ತಂಬುಕುತ್ತಿರ ಈ ಬಾರಿ ಕಳಕಂಡ ತಂಡದೊಂದಿಗೆ ಸೆಣಸಾಡಲಿದೆ.

ಇಂದು ಸಮಾರೋಪ : ಮಡ್ಲಂಡ ಕಪ್ ಕ್ರಿಕೆಟ್‍ನ ಸಮಾರೋಪ ಸಮಾರಂಭ ತಾ. 27ರಂದು (ಇಂದು) ನಡೆಯಲಿದೆ. ಕುಟುಂಬದ ಪಟ್ಟೆದಾರ ಬಿ. ಪೊನ್ನಪ್ಪ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಎಸ್ಪಿ ರಾಜೇಂದ್ರ ಪ್ರಸಾದ್, ಚೇರಂಡ ಕಿಶನ್, ಸಂಕೇತ್ ಪೂವಯ್ಯ, ಕಾರ್ಸನ್ ಕಾರ್ಯಪ್ಪ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಅಪರಾಹ್ನ 12 ರಿಂದ ಪಂದ್ಯಾಟ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ.

ಈ ತನಕದ ವಿವರ

ವರ್ಷ ಆಯೋಜಿಸಿದ ಕುಟುಂಬ ವಿಜೇತರು

2000 ಕೀತಿಯಂಡ ಬಲ್ಲಚಂಡ

2001 ತಾತಂಡ ಬಲ್ಲಚಂಡ

2002 ಬಲ್ಲಂಡ ಮಣವಟ್ಟಿರ

2003 ಕಾಂಡೆರ ಮಾತಂಡ

2004 ಮಣವಟ್ಟಿರ ಕಾಣತಂಡ

2005 ಕುಂಡ್ರಂಡ ಮಣವಟ್ಟಿರ

2006 ಅಮ್ಮುಣಿಚಂಡ ಮೂಕೋಂಡ- ಚೆಕ್ಕೇರ ಜಂಟಿ ವಿಜೇತರು

2007 ನಂಬುಡುಮಾಡ ಚೆಕ್ಕೇರ

2008 ಕೂತಂಡ ಕಾಣತಂಡ

2009 ಕೋಳೆರ ಕಾಣತಂಡ

2010 ಬಲ್ಲಿಮಾಡ ಕಾಣತಂಡ

2011 ಮಾಚಿಮಾಡ ಚೆಕ್ಕೇರ

2012 ಚಾಮೆರ ಕಾಣತಂಡ

2013 ಅಡ್ಡೇಂಗಡ ಚೆಕ್ಕೇರ

2014 ಕೊಕ್ಕೇಂಗಡ ಚೆಕ್ಕೇರ

2015 ಚೌರೀರ ಚೆಕ್ಕೇರ

2016 ಮುಕ್ಕಾಟಿರ (ಪುಲಿಕೋಟ್) ಚೆಕ್ಕೇರ

2017 ಅಳಮೇಂಗಡ ಕಳಕಂಡ

2018 ಮಡ್ಲಂಡ ?