ಶನಿವಾರಸಂತೆ, ಮೇ 26: ಮಿಷನ್ ಇಂದ್ರಧನುಷ್ ಮರು ಲಸಿಕೆ ಕಾರ್ಯಕ್ರಮದಿಂದ ಮಕ್ಕಳಿಗೆ ಬರಬಹುದಾದ ವಿವಿಧ ರೋಗಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ನೀಲೇಶ್ ಅಭಿಪ್ರಾಯಪಟ್ಟರು.

ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಿಷನ್ ಇಂದ್ರಧನುಷ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಶೇ. 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ - ಪಂಗಡದ 2 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳಿರುವದು ಆರೋಗ್ಯ ಇಲಾಖೆ ಸಮೀಕ್ಷೆಯಿಂದ ತಿಳಿದು ಬಂದ ಹಿನ್ನೆಲೆ ಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ವನ್ನು ಆಯೋಜಿಸ ಲಾಗಿದೆ ಎಂದರು.

ಪ್ರತಿ ಮಗುವಿಗೆ, ಗರ್ಭಿಣಿಯರಿಗೆ ಕಾಲಕಾಲಕ್ಕೆ ಲಸಿಕೆ ನೀಡಬೇಕು. ಈ ನಿಟ್ಟಿನಲ್ಲಿ ಉಪ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾರ್ಗಸೂಚಿ ಯಲ್ಲಿ ಇರುವ ಎಲ್ಲಾ ಲಸಿಕೆಗಳನ್ನು ನೀಡಲು ಯೋಜನೆ ರೂಪಿಸಿಕೊಳ್ಳ ಬೇಕು ಎಂದು ಡಾ. ನೀಲೇಶ್ ಸಲಹೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಕೊಡ್ಲಿಪೇಟೆ ಸರಕಾರಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಂಗನಾಥ್ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಕಾರ್ಯಕ್ರಮದ ಮಾಹಿತಿ ನೀಡಿದರು.