ಕುಶಾಲನಗರ, ಮೇ 25: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡಿರುವ ಕಾವೇರಿ ಯಾತ್ರೆ ಮತ್ತು ವಾಹನ ಜಾಥಾ ಶುಕ್ರವಾರ ಕುಶಾಲನಗರದ ಮೂಲಕ ಮೈಸೂರು ಜಿಲ್ಲೆ ಕಡೆಗೆ ನಿರ್ಗಮಿಸಿತು. ಕುಶಾಲನಗರಕ್ಕೆ ಜಾಥಾ ಆಗಮಿಸಿದ ಸಂದರ್ಭ ಕುಶಾಲನಗರ ಕೊಡವ ಸಮಾಜದ ಪದಾಧಿಕಾರಿಗಳು ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪದಾಧಿಕಾರಿಗಳು ಬೈಚನಹಳ್ಳಿ ಬಳಿ ಸ್ವಾಗತಿಸಿ ಜಾಥಾಗೆ ಶುಭ ಕೋರಿದರು. ಬೈಚನಹಳ್ಳಿ ಮಾರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎನ್‍ಸಿ ಮುಖ್ಯಸ್ಥ ನಂದಿನೆರವಂಡ ಯು. ನಾಚಪ್ಪ, ವೇದ ಕಾಲದ ಸಪ್ತ ನದಿಗಳ ಪೈಕಿ ಕಾವೇರಿಗೂ ಸ್ಥಾನ ಇದೆ. ಇದೀಗ ಕಾವೇರಿ ನದಿ ಇಂದು ಆಪತ್ತಿನಲ್ಲಿ ಸಿಲುಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಸರಸ್ವತಿ ನದಿಯಂತೆ ಅದೃಶ್ಯವಾಗುವ ಆತಂಕ ಇರುವದಾಗಿ ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ನದಿಯನ್ನು ಪುನರುಜ್ಜೀವನ ಗೊಳಿಸುವದರ ಜೊತೆಗೆ ಜೀವಂತಿಕೆಯಿಂದ ನಳನಳಿಸುವಂತೆ ನೋಡಿಕೊಳ್ಳುವದು ಎಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನದ ಅಗತ್ಯವಿದೆ ಎಂದರು.
ಹೊಗೇನಕಲ್ ಮೂಲಕ ತಾ. 26 ರಂದು ತಮಿಳುನಾಡು ಪ್ರವೇಶಿಸಿ ಕಾವೇರಿ ನದಿ ಪಾತ್ರದಲ್ಲಿ ಸಂಚರಿಸಿ ತಾ. 30 ರಂದು ಕಾವೇರಿ ನದಿ ಸಮುದ್ರ ಸೇರುವ ಪೂಂಪ್‍ಹಾರ್‍ನಲ್ಲಿ ಸಮಾರೋಪಗೊಳ್ಳಲಿದೆ. ಈ ವೇಳೆ ಕಾವೇರಿ ನದಿ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲ ನಿರ್ಣಯಗಳನ್ನು ತೆಗೆದುಕೊಂಡು ದೇಶದ ಪ್ರಧಾನಿ ಸೇರಿದಂತೆ ಎಲ್ಲಾ ಪ್ರಮುಖರಿಗೆ ಕಳುಹಿಸಲಾಗುವದು ಎಂದರು.
ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ರೇಖಾ ನಾಚಪ್ಪ, ಅಜ್ಜಿಕುಟ್ಟಿರ ಲೋಕೇಶ್, ಬಾಚರಣಿಯಂಡ ಚಿಪ್ಪಣ್ಣ, ಚೆಂಬಂಡ ಜನತ್, ಪುಲ್ಲೇರ ಕಾಳಪ್ಪ, ಸ್ವಾತಿ, ಮೂಕೋಂಡ ದಿಲೀಪ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಮಾಜಿ ಅಧ್ಯಕ್ಷರು ಹಾಗೂ ಕಾಫಿ ಬೆಳೆಗಾರ ಜೆಮ್ಸಿ ಪೊನ್ನಪ್ಪ, ನದಿ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್. ಸೋಮಶೇಖರ್, ಕುಶಾಲನಗರ ಮತ್ತು ಸಿದ್ದಾಪುರ ಕೊಡವ ಸಮಾಜದ ಪ್ರಮುಖರು ಇದ್ದರು.
ಗುಡ್ಡೆಹೊಸೂರು : ತಲಾಕಾವೇರಿಯಿಂದ ಪೂಂಪುಹಾರ್ ನವರಗೆ ವಾಹನ ಜಾಥಾ ನಡೆಸಿ ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಜಾಥಾಕ್ಕೆ ಗುಡ್ಡೆಹೊಸೂರಿನಲ್ಲಿ ಸ್ವಾಗತ ನೀಡಲಾಯಿತು.
ಈ ಸಂದಭರ್À ಸಿ.ಎನ್.ಸಿ. ಅಧ್ಯಕ್ಷ ನಂದಿನೆರವಂಡ ನಾಚಪ್ಪ ನೇತೃತ್ವದಲ್ಲಿ ಜಾಥಾ ತೆರಳುತ್ತಿದೆ. ನಂತರ ಜಾಥಾವು ಕುಶಾಲನಗರ ಮೂಲಕ ಮಂಡ್ಯ ಜಿಲ್ಲೆಯ ಮೂಲಕ ಪ್ರಯಾಣ ಬೆಳೆಸಿತು.