ಸೋಮವಾರಪೇಟೆ, ಮೇ 25: ಸಿಲ್ವರ್ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಸಮೀಪದ ಬಿಳಿಕಿಕೊಪ್ಪದ ಇಳಿಜಾರು ರಸ್ತೆಯಲ್ಲಿ ಸಂಭವಿಸಿದೆ. ಲಾರಿಯೊಳಗಿದ್ದ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ. ಇಂದು ಸಂಜೆ ವೇಳೆಗೆ ತಾಕೇರಿ ಗ್ರಾಮದಿಂದ ಟಿಂಬರ್ ಮರದ ನಾಟಾಗಳನ್ನು ತುಂಬಿಸಿಕೊಂಡು ಸೋಮವಾರಪೇಟೆ-ಶನಿವಾರಸಂತೆ ಮುಖ್ಯರಸ್ತೆಯ ಬಿಳಿಕಿಕೊಪ್ಪ ಗ್ರಾಮದ ಬಳಿ ತೆರಳುತ್ತಿದ್ದಾಗ, ಆಕಸ್ಮಿಕವಾಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಎಡ ಬದಿಗೆ ಮಗುಚಿ ಬಿದ್ದಿದೆ.

ಲಾರಿಯೊಳಗಿದ್ದ ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಧನು ಮತ್ತು ಉಮೇಶ್ ಅವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧನು ಅವರ ತಲೆ ಭಾಗ ಹಾಗೂ ಉಮೇಶ್ ಅವರ ಕೈ,ಕಾಲುಗಳಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.