ಮಡಿಕೇರಿ, ಮೇ 25 : ಜಿಲ್ಲೆಯ ಕಾಡಾನೆ ಸಮಸ್ಯೆ ಬಗ್ಗೆ ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನೂತನ ಅರಣ್ಯ ಸಚಿವರ ಗಮನಕ್ಕೆ ತರುವದಾಗಿ ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷ ಹಾಗೂ ರೈತರು, ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಮುಖಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಮಡಿಕೇರಿಯ ಅರಣ್ಯ ಭವನದಲ್ಲಿ ರೈತರು, ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ವತಿಯಿಂದ ಅರಣ್ಯ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಿಪರೀತವಾಗಿದೆ. ದಕ್ಷಿಣ ಕೊಡಗಿನಲ್ಲಿ ಹುಲಿ ಧಾಳಿ ನಡೆಯುತ್ತಿದೆ. ಇದರಿಂದ ರೈತರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಮುಂದಾಗುವದಾಗಿ ಅವರು ಹೇಳಿದರು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಭೆ ಆಯೋಜಿಸಿದ್ದು, ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡುವದಾಗಿ ಸಂಕೇತ್ ಪೂವಯ್ಯ ಹೇಳಿದರು. ಜಿಲ್ಲೆಯಲ್ಲಿ 41 ಮಂದಿ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಶಾಶ್ವತ ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರಲ್ಲದೇ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ನೂತನ ಸರಕಾರಕ್ಕೆ ಯಾವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಶ್ನಿಸಿದರು. ದಕ್ಷಿಣ ಕೊಡಗಿನಲ್ಲಿ ಹುಲಿ ಸೆರೆ ಹಿಡಿಯಲು ನೂತನ ತಂತ್ರಜ್ಞಾನ ಬಳಸಬೇಕೆಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಸಭೆಯನ್ನು ಕರೆದು ಸಭೆಗೆ ಗೈರಾಗಿದ್ದಾರೆ. ಮಾತ್ರವಲ್ಲದೇ ತಮ್ಮ ಅಧಿಕಾರಿಗಳನ್ನು ಕೂಡ ಸಭೆಗೆ ಕರೆಸದೆ ನಿರ್ಲಕ್ಷ್ಯ ತೋರಿರುವದು ಖಂಡನೀಯ. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಇದನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭ ಕಾಫಿ ಬೆಳೆಗಾರರಿಗೆ ನಷ್ಟ ಸಂಭವಿಸುತ್ತಿದೆ. ಕಾಡಾನೆಗಳನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದರು. ಜಿಲ್ಲೆಯ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆ ರೂಪಿಸಲು ಸರಕಾರವನ್ನು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ತೊಂದರೆಯಾಗಿದೆ. ಕಾರ್ಮಿಕರು ಭಯದಲ್ಲೇ ದಿನ ದೂಡುವ ಪರಿಸ್ಥಿತಿ ಎದುರಾಗಿದೆ. ಪ್ರತಿ ಸಭೆಯಲ್ಲೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗೈರು ಹಾಜರಾಗುತ್ತಿದ್ದು, ಮುಂದಿನ ದಿನದಲ್ಲಿ ಇವರ ಧೋರಣೆಯನ್ನು ಖಂಡಿಸಿ ಅರಣ್ಯ ಭವನಕ್ಕೆ ಬೀಗ ಜಡಿಯಲಾಗುವದು ಎಂದರು.
ಕಾರ್ಮಿಕ ಮುಖಂಡ ಪಿ.ಆರ್ ಭರತ್ ಮಾತನಾಡಿ, ಕರಡಿಗೋಡುವಿನಲ್ಲಿ ಮೋಹನ್ದಾಸ್ ಅವರ ಮೇಲೆ ಕಾಡಾನೆ ಧಾಳಿ ನಡೆಸಿದ ಸಂದರ್ಭ ಸಮಿತಿ ವತಿಯಿಂದ ಹಲವಾರು ಹೋರಾಟಗಳು ನಡೆಸಿ ಕಾಡಾನೆಗಳನ್ನು ತೋಟದಿಂದ ಕಾಡಿಗೆ ಅಟ್ಟುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ, ಇಲಾಖಾಧಿಕಾರಿಗಳು ಈ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವದು ಎಂದರು.
ಸಮಿತಿಯ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಯ್ಯ ಮಾತನಾಡಿ, ಕಾಡಾನೆ ಹಾವಳಿಯ ಬಗ್ಗೆ ನಿರಂತರವಾಗಿ ಮನವಿ ಪತ್ರ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಲಿಲ್ಲ. ಈ ಹಿಂದೆ ಹೋರಾಟದ ಸಂದರ್ಭ ನೀಡಿದ ಭರವಸೆಗಳನ್ನು ಅರಣ್ಯ ಇಲಾಖಾಧಿಕಾರಿಗಳು ಈಡೇರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ನಡಿಕೇರಿಯಂಡ ಮಾಚಯ್ಯ, ಬುಟ್ಟಿಯಂಡ ಹರಿ ಸೋಮಯ್ಯ, ಎಂ.ಕೆ. ಅರ್ಜುನ್ ತಿಮ್ಮಯ್ಯ, ಕೊಂಗೇರ ಗಪ್ಪಣ್ಣ, ರೈತ ಸಂಘದ ಸುಜಯ್ ಬೋಪಯ್ಯ, ಸಿ.ಎ ನಂದಾ, ಚೆಪ್ಪುಡಿರ ಸತೀಶ್, ಕಂಡ್ರತಂಡ ರಾಯ್ ಕರುಂಬಯ್ಯ, ವೀರಾಜಪೇಟೆ ಡಿ.ಸಿ.ಎಫ್ ಮರಿಯ ಕ್ರಿಸ್ತುರಾಜ್ ಸೇರಿದಂತೆ ಇನ್ನಿತರರು ಇದ್ದರು.
ವೀರಾಜಪೇಟೆಯಲ್ಲಿ ಸಭೆ
ಮಡಿಕೇರಿ ಅರಣ್ಯ ಭವನದಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಬೆಳೆಗಾರರು ಹಾಗೂ ಕಾರ್ಮಿಕ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂದರ್ಭ ತಾ.28 ರಂದು ವೀರಾಜಪೇಟೆಯ ಅರಣ್ಯ ಭವನದಲ್ಲಿ ರಾಜ್ಯಮಟ್ಟದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವದಾಗಿ ವನ್ಯಜೀವಿ ಉಪಅರಣ್ಯ ಸಂರಕ್ಷಣಾಧಿಕಾರಿ ಜಯಾ ಅವರು ಸಮಿತಿಯ ಪದಾಧಿಕಾರಿಗಳಿಗೆ ಲಿಖಿತವಾಗಿ ನೀಡಿದರು. ಇದೇ ಸಂದರ್ಭ ಸಮಿತಿಯ ವತಿಯಿಂದ ಸಿದ್ದಾಪುರ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನ ಪೈಕಿ 15 ಕಾಡಾನೆಗಳನ್ನು ಮುಂದಿನ 15 ದಿನಗಳ ಒಳಗಾಗಿ ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಮನವಿಪತ್ರ ನೀಡಿದರು. -ವರದಿ: ಎ.ಎನ್ ವಾಸು