ಮಡಿಕೇರಿ, ಮೇ 25: ಆರೋಗ್ಯ ಇಲಾಖೆ ವತಿಯಿಂದ ತಾ. 28 ರಿಂದ ಜೂನ್ 9 ರವರೆಗೆ ಅತಿಸಾರ ಭೇದಿ ನಿಯಂತ್ರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂತಾನೋತ್ಪತ್ತಿ ಮತ್ತು ಶಿಶು ಆರೋಗ್ಯಾಧಿಕಾರಿ ಡಾ. ಎಂ.ಎನ್. ನಿಲೇಶ್ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲಿ ಶೇ. 10 ರಷ್ಟು ಮಕ್ಕಳು ಈ ಅತಿಸಾರ ಭೇದಿಯಿಂದ ಸಾವನ್ನಪ್ಪುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ಸರಕಾರ ಅಭಿಯಾನವನ್ನು ನಡೆಸಲು ಆದೇಶಿಸಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಐದನೇ ಬಾರಿಗೆ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುತ್ತಿದೆ. ತಾ. 28 ರಂದು ಜಿಲ್ಲಾಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿದ್ದರೆ ಓಆರ್‍ಎಸ್ ಔಷಧಿ ನೀಡಿ ಅದನ್ನು ಯಾವ ಸಂದರ್ಭದಲ್ಲಿ ಬಳಸಬೇಕೆಂಬದರ ಕುರಿತು ತಿಳುವಳಿಕೆ ನೀಡಿ ಅತಿಸಾರ ಭೇದಿ ತಡೆಗೆ ಜಾಗೃತಿ ಮೂಡಿಸಲಿದ್ದಾರೆ. ಶಾಲೆಗಳಲ್ಲೂ ಕೂಡ ಓಆರ್‍ಎಸ್ ಉಚಿತವಾಗಿ ಸಿಗಲಿದೆ. ಈ ಅತಿಸಾರ ಭೇದಿ ನಿಯಂತ್ರಣಕ್ಕೆ ಝಿಂಕ್ ಮಾತ್ರೆ ಹಾಗೂ ಓಆರ್‍ಎಸ್ ಔಷಧ ಅತ್ಯಗತ್ಯವಾಗಿದ್ದು, ಎಲ್ಲಾ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಅಂಗನವಾಡಿ ಕೇಂದ್ರಗಳಲ್ಲಿ ಈ ಔಷಧಿಗಳು ಉಚಿತವಾಗಿ ಲಭ್ಯವಿದೆ ಎಂದು ಡಾ. ನಿಲೇಶ್ ತಿಳಿಸಿದರು.

ಐದು ವರ್ಷದ ಒಳಗಿನ ಮಕ್ಕಳ ಪೋಷಕರು ಅತಿಸಾರ ಭೇದಿಯ ಬಗ್ಗೆ ಅರಿತುಕೊಂಡು ಎಚ್ಚರ ವಹಿಸುವದರೊಂದಿಗೆ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಮುಂದಾಗಬೇಕು. ಈ ಕುರಿತು ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ವಿವರ - ಮಾಹಿತಿ ಪಡೆದುಕೊಳ್ಳಬಹುದು ಎಂದು ನಿಲೇಶ್ ಹೇಳಿದರು.