ಮಡಿಕೇರಿ, ಮೇ 24: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನ ಬದ್ಧ ಸ್ಥಾನಮಾನ ನೀಡುವ ಮೂಲಕ ಅದನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಲಕಾವೇರಿಯಿಂದ ಪೊಂಪುಹಾರ್‍ವರೆಗೆ ಹಮ್ಮಿ ಕೊಳ್ಳಲಾಗಿರುವ ವಾಹನ ಜಾಥಾಕ್ಕೆ ಇಂದು ಚಾಲನೆ ದೊರೆಯಿತು.

ತಲಕಾವೇರಿ ಕ್ಷೇತ್ರದಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಮಾತೆ ಕಾವೇರಿಗೆ ಅಗಸ್ತ್ಯನಿಗೆ ಹಾಗೂ ಗಣಪತಿಗೆ ಪೂಜೆ ಸಲ್ಲಿಸುವದರ ಮೂಲಕ ಜಾಥಾ ಆರಂಭವಾಯಿತು. ಬಳಿಕ ಭಾಗಮಂಡಲಕ್ಕೆ ಆಗಮಿಸಿ ಭಗಂಡೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ನಂತರ ಅಯ್ಯಂಗೇರಿ, ದೇವಟ್ಟಿಪರಂಬು, ನಾಪೋಕ್ಲು, ಬೆಟ್ಟಗೇರಿ ಮೂಲಕ ಮಡಿಕೇರಿಗೆ ಜಾಥಾ ಆಗಮಿಸಿತು.ಮಡಿಕೇರಿಯಲ್ಲಿ ಜಾಥಾ ಮಡಿಕೇರಿಗೆ ಆಗಮಿಸಿದ ಸಿಎನ್‍ಸಿ ಜಾಥಾವನ್ನು ಜಿ.ಟಿ. ವೃತ್ತದಲ್ಲಿ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಹಾಗೂ ಮಡಿಕೇರಿ ಕೊಡವ ಸಮಾಜದ ಪ್ರಮುಖರಾದ ಮಣವಟ್ಟಿರ ಚಿಣ್ಣಪ್ಪ, ಡಾನ್ ದೇವಯ್ಯ, ರತನ್ ಕುಟ್ಟಯ್ಯ ಇತರರು ಬರಮಾಡಿಕೊಂಡರು.

ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ನಂತರ ಮೂರ್ನಾಡಿಗೆ ತೆರಳಿದ ಜಾಥಾವನ್ನು ಅಲ್ಲಿನ ಕೊಡವ ಸಮಾಜ (ಮೊದಲ ಪುಟದಿಂದ) ಪ್ರಮುಖರಾದ ಬಡುವಂಡ ಅರುಣ, ಪೆಮ್ಮಡಿಯಂಡ ವೇಣು ಅಪ್ಪಣ್ಣ, ಪಳಂಗಂಡ ಗಣೇಶ್ ಮತ್ತಿತರರು ಬರಮಾಡಿಕೊಂಡರು. ವೀರಾಜಪೇಟೆಯಲ್ಲಿ ಕೊಡವ ಸಮಾಜ ಪ್ರಮುಖ ವಾಂಚಿರ ನಾಣಯ್ಯ ಮತ್ತಿತರರು ಬರಮಾಡಿ ಕೊಂಡರು. ಗೋಣಿಕೊಪ್ಪಲಿನಲ್ಲಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಕೊಲ್ಲಿರ ಜಯ, ಸುಮಿ ಸುಬ್ಬಯ್ಯ, ಕೊಲ್ಲಿರ ಧರ್ಮಜ ಮತ್ತಿತರರು ಬರಮಾಡಿಕೊಂಡರು. ಅಲ್ಲಿಂದ ಪಾಲಿಬೆಟ್ಟಕ್ಕೆ ತೆರಳಿದ ಜಾಥಾವನ್ನು ಬಿಜೆಪಿಯ ಯುವ ಮುಖಂಡ ಕುಟ್ಟಂಡ ಅಜಿತ್ ಮತ್ತಿತರರು ಬರಮಾಡಿಕೊಂಡರು. ಜಾಥಾ ಇಂದು ಅಲ್ಲಿಯೇ ತಂಗಿದ್ದು, ತಾ. 25 ರಂದು (ಇಂದು) ಸಿದ್ದಾಪುರಕ್ಕೆ ಜಾಥಾ ತೆರಳಲಿದೆ.