ಮಡಿಕೇರಿ, ಮೇ. 24: ಒಂದೆಡೆ ಹೋಮ, ಹವನ, ಮತ್ತೊಂದೆಡೆ ಭಕ್ತರಿಂದ ಗಣಪನಿಗೆ ಜೈಕಾರದ ಘೋಷಣೆಯೊಂದಿಗೆ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ವತಿಯಿಂದ ಇಂದು ಕೋಟೆ ಗಣಪತಿಗೆ ಸ್ವರ್ಣ ಕಿರೀಟ ಸಮರ್ಪಣೆ ನೆರವೇರಿತು.ಈ ಪ್ರಯುಕ್ತ ಇಂದು ಬೆಳಗ್ಗಿನಿಂದಲೇ ವಿವಿಧ ಪೂಜಾ ಕೈಂಕರ್ಯಗಳು, 108 ತೆಂಗಿನಕಾಯಿ ಗಣಪತಿ ಹೋಮ, ಮೂಡಪ್ಪ ಸೇವೆ ನೆರವೇರಿತು. ಬಳಿಕ ಮಧ್ಯಾಹ್ನ 12.20 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ವಿಘ್ನ ನಿವಾರಕನಿಗೆ ಸ್ವರ್ಣ ಕಿರೀಟವನ್ನು ಶ್ರದ್ಧಾ ಭಕ್ತಿಯೊಂದಿಗೆ ಅರ್ಪಿಸಲಾಯಿತು.ಅರ್ಚಕರಾದ ಆದರ್ಶ್ ಭಟ್ ಮತ್ತು ತಂಡ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಿದರು. ಮಹಾ ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. 3.86 ಲಕ್ಷ ರೂ. ಮೌಲ್ಯದ ಕಿರೀಟವನ್ನು ಕೋಟೆ ಗಣಪತಿಗೆ ಸಮರ್ಪಿಸಲಾಯಿತು.

ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ಸತ್ಯನಾರಾಯಣರಾವ್, ಪ್ರಮುಖರಾದ ವಿಶ್ವನಾಥ್, ಬಿ.ಎಂ. ರಾಜೇಶ್, ವಿನಾಯಕ್, ಬಿ.ವಿ. ರೋಷನ್, ಸುಮೇಶ್, ಗುರುಕಿರಣ್, ಸತೀಶ್ ಭಟ್, ರಘುನಾಥ್ ರಾವ್ ಮತ್ತಿತರರು ಹಾಜರಿದ್ದರು.