ಗೋಣಿಕೊಪ್ಪ ವರದಿ, ಮೇ 23 : ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಸುಹಿತನಂದಾಜಿ ಮಹರಾಜ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮೂರು ದಿನ ನಡೆಯುವ ಕಾರ್ಯಕ್ರಮವನ್ನು ಶಾರದಾಶ್ರಮದ ಶಾಂಭವನಂದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಲ್ಲಿ ವೈದ್ಯಕೀಯ ಸೇವೆ ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಸೇವಾಕಾರ್ಯವಾಗಿ ಆರೋಗ್ಯ ಕಾಪಾಡಲು ಸೇವೆಯನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿದೆ. ವಿವೇಕಾನಂದರ ಚಿಂತನೆಯಂತೆ ಸೇವೆ ಜನರಿಗೆ ಸಿಗುತ್ತಿದೆ ಎಂದರು.

ಕಳಂಚೇರಿ ಮಠ ಸ್ವಾಮೀಜಿ ಶಾಮತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಂಸ್ಥೆಗಳ ಮೂಲಕ ಸೇವಾ ಕಾರ್ಯ ನಡೆಸುವದು ಹೆಚ್ಚು ಪ್ರಬಲವಾಗಲು ಕಾರಣವಾಗಲಿದೆ. ಒಬ್ಬ ವ್ಯಕ್ತಿ ತನ್ನ ಆಯಸ್ಸು ಮುಗಿಯುವವರೆಗೆ ಕಾರ್ಯ ನಡೆಸಬಹುದು. ಆದರೆ, ಸಂಸ್ಥೆಗಳ ಮೂಲಕ ನೀಡುವ ಸೇವೆ ನಿರಂತರವಾಗಿ ಸಿಗಲಿದೆ. ಇಂತಹ ಸೇವೆ ಆಶ್ರಮದ ಮೂಲಕ ಜನರಿಗೆ ಲಭ್ಯವಾಗುತ್ತಿದೆ ಎಂದರು.

ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಇನ್ಸ್ಟಿಟ್ಯೂಟ್ ಆರ್‍ಎಂಒ ಡಾ. ರಾಜೇಶ್‍ಕುಮಾರ್, ವಿಜಾಗ್ ರಾಮಕೃಷ್ಣ ಸೇವಾಶ್ರಮ ಕಾರ್ಯದರ್ಶಿ ಆತ್ಮವಿದಾನಂದಾಜಿ ಮಹರಾಜ್, ತಿರುವನಂತಪುರಂ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಮೋಕ್ಯಾವೃಥನಂದಾಜಿ ಮಹರಾಜ್, ಜಮ್ಮು ರಾಮಕೃಷ್ಣ ಸೇವಾಶ್ರಮ ಕಾರ್ಯದರ್ಶಿ ನಿರಂತರನಂದಾಜಿ ಮಹರಾಜ್, ಮುಂಬಯಿ ರಾಮಕೃಷ್ಣ ಮಿಷನ್ ಅಧ್ಯಕ್ಷ ಸತ್ಯದೇವನಂದಾಜಿ ಮಹರಾಜ್ ಮಂಗಳೂರು ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಜಿಟಕಾಮನನಂದಾಜಿ ಮಹರಾಜ್ ಹಾಗೂ ಪೊನ್ನಂಪೇಟೆ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಬೋಧ ಸ್ವರೂಪನಂದಾಜಿ ಉಪಸ್ಥಿತರಿದ್ದರು.

ಈ ಸಂದರ್ಭ ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಸುಹಿತನಂದಾಜಿ ಮಹರಾಜ್ ಅವರನ್ನು ರಾಮಕೃಷ್ಣ ಸೇವಾಶ್ರಮ ಸಲಹಾ ಸಮಿತಿ ವತಿಯಿಂದ ಒಡಿಕತ್ತಿ ನೀಡಿ ಗೌರವಿಸಲಾಯಿತು.

ಸಂಜೆ ಆರತಿ, ಭಜನೆ, ದತ್ತಾತ್ರೆಯ ವೇಲಂಕರ್ ಅವರಿಂದ ಹರಿಕಥೆ ನಡೆಯಿತು. ಭುವನಾತ್ಮನಂದಾಜಿ ಮಹರಾಜ್ ವಂದಿಸಿದರು.