ಗೋಣಿಕೊಪ್ಪ ವರದಿ, ಮೇ 23: ಪಟ್ಟಣಿ ಆಚರಿಸುವ ಮೂಲಕ ಹೆಬ್ಬಾಲೆ ಬೋಡ್‍ನಮ್ಮೆಗೆ ಚಾಲನೆ ನೀಡಲಾಯಿತು. ಊರಿನವರು ಅನ್ನವನ್ನು ಬಿಟ್ಟು ಫಲಹಾರ ಸೇವಿಸುವ ಮೂಲಕ ದೇವರ ಕಟ್ಟು ಪಾಡುಗಳಿಗೆ ಅನುಗುಣವಾಗಿ ಆಚರಿಸಿದರು.

ಮಧ್ಯಾಹ್ನ ಊರಿನವರು ದೇವಸ್ಥಾನದಲ್ಲಿ ಸೇರಿ ಪೂಜೆಯ ಬಳಿಕ ದೇವಸ್ಥಾನ ಸನಿಹವಿರುವ ಅಂಬಲದಲ್ಲಿ ಹಬ್ಬಕ್ಕೆ ಉಪಯೋಗಿಸುವ ದೈವಿಕ ವಸ್ತುಗಳನ್ನು ಸ್ವಚ್ಛಗೊಳಿಸಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ನಂತರ ಬೇಟೆ ಕರುಂಬ ಸ್ಥಾನಕ್ಕೆ ಬೇಟೆ ನಾಯಿ ಹರಕೆ ಸಲ್ಲಿಸಿ ಭದ್ರಕಾಳಿ ದೇವಸ್ಥಾನಕ್ಕೆ ವಾಲಗದೊಂದಿಗೆ ತೆರಳಿ, ಪೂಜಿಸಲಾಯಿತು. ಊರೇ ನಾಡೇ ತಕ್ಕರೆ, ಬಿಲ್ ಬುಡ್‍ಡಾ ಎಂಬ ಮನವಿಯ ಘೋಷಣೆಯೊಂದಿಗೆ ಬೇಡು ಹಬ್ಬಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಕುಂಡೆ, ಕುಂಡೆ ಎಂದು ಕೂಗಿ ಕುಣಿಯುವ ಮೂಲಕ ದೇವರನ್ನು ಸಂತೃಪ್ತಿಗೊಳಿಸಲು ಅನುವು ಮಾಡಿಕೊಡಲಾಯಿತು.

ಸಂಜೆಯಿಂದ ವೇಷಧಾರಿಗಳು ಮನೆ ಮನೆಗೆ ತೆರಳಿ ಸಂಭ್ರಮಿಸುವ ಮೂಲಕ ಸಂಪ್ರಾದಾಯದಂತೆ ಬೇಡುವ ಆಚರಣೆ ಮಾಡಿದರು.

ಇಂದು ತೆರೆ: ಕುಂಡೆ, ಕುಂಡೆ ಎಂದು ಮನೆ, ಮನೆಗೆ ತೆರಳಿ ಬೇಡುವ ಬೇಡು ಹಬ್ಬಕ್ಕೆ ಇಂದು ತೆರೆ ಬೀಳಲಿದೆ. ತಾ. 24 ರಂದು (ಇಂದು) ಅಯ್ಯಪ್ಪ, ಭದ್ರಕಾಳಿ ಹಾಗೂ ಬೇಟೆ ಕರುಂಬ ದೇವರುಗಳಿಗೆ ಹರಕೆ ಹೊತ್ತ ವೇಷಾಧಾರಿ ಭಕ್ತರು ಗ್ರಾಮದಲ್ಲಿ ಮನೆ ಮನೆ ತೆರಳಿ ದೇವರಿಗೆ ಕಾಣಿಕೆ ಬೇಡುತ್ತಾರೆ.

ಮಧ್ಯಾಹ್ನ ವೇಷಧಾರಿ ಭಕ್ತರು ಅಂಬಲಕ್ಕೆ ಬಂದು ಕುಣಿಯುತ್ತಾರೆ. ಅಲ್ಲಿ ಭಂಡಾರ ಪೆಟ್ಟಿಗೆ, ಪಣಿಕರ ತೆಗೆಯುವ ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿ, ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸುವದರೊಂದಿಗೆ ಮೊಗ ಪಾಟ್ ಅಯ್ಯಪ್ಪ ದೇವರ ಬೇಟೆಯ ವಾಹನವಾದ ಕುದುರೆಯನ್ನು ಅಯ್ಯಪ್ಪ ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಅಂಬಲದಲ್ಲಿ ಕುಣಿದು ದೇವರನ್ನು ಸಂತೃಪ್ತಿಗೊಳಿಸಲಾಗುತ್ತದೆ.

ಕೂಡಿಗೆ: ದಕ್ಷಿಣ ಕೊಡಗಿನ ಬುಡಕಟ್ಟು ಜನರ ಬೈಗುಳದ ಸಂಭ್ರಮದ ಹಬ್ಬವಾದ ಬೇಡು ಹಬ್ಬವನ್ನು ಬುಡಕಟ್ಟು ಜನಾಂಗದ ಬಾಲಕರು ಮತ್ತು ಯುವಕರು ವಿಶಿಷ್ಟ ವೇಷ ತೊಟ್ಟು, ಡ್ರಮ್, ತಟ್ಟೆ, ಕ್ಯಾನ್ ಗಳನ್ನು ತಾಳಮೇಳ ಮಾಡಿಕೊಂಡು ಕುಣಿದು ಕುಪ್ಪಳಿಸುತ್ತಾ ಕೂಡಿಗೆ - ಹಾಸನ -ಕುಶಾಲನಗರ ಹೆದ್ದಾರಿಯಲ್ಲಿ ವಾಹನಗಳ ಎದುರು ಕುಣಿದು, ಎದುರಿಗೆ ಸಿಕ್ಕವರ ಮತ್ತು ಅಂಗಡಿ ಮಳಿಗೆಗಳಲ್ಲಿ ಹಣ ಬೇಡುತ್ತಾ ಆಚರಿಸಿದರು.

ಕುಶಾಲನಗರ : ದಕ್ಷಿಣ ಕೊಡಗಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಬೇಡು ಹಬ್ಬ ಅಂಗವಾಗಿ ಸ್ಥಳೀಯ ಯುವಕರು ವೇಷಧಾರಿ ಗಳಾಗಿ ಕುಶಾಲನಗರ, ಕೊಪ್ಪ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಜನರಿಗೆ ಮನರಂಜನೆ ನೀಡುತ್ತಿದ್ದ ದೃಶ್ಯ ಕಂಡುಬಂತು.

ಹರಕೆ ಹೊತ್ತ ಬುಡಕಟ್ಟು ಜನಾಂಗದ ವಿವಿಧ ವೇಷಧಾರಿಗಳು ಪಟ್ಟಣ ವ್ಯಾಪ್ತಿಯ ಅಂಗಡಿ ಮಳಿಗೆಗಳಿಗೆ, ಮನೆಗಳಿಗೆ ತೆರಳಿ ಕಾಣಿಕೆ ಬೇಡುವದರೊಂದಿಗೆ ತಮ್ಮದೇ ಆದ ಶೈಲಿಯ ನೃತ್ಯ ಹಾಗೂ ಗಾಯನ ಮೂಲಕ ದಾರಿಹೋಕರನ್ನು ಅಡ್ಡಗಟ್ಟುತ್ತಿದ್ದರು. ವಿಚಿತ್ರ ವಿನ್ಯಾಸದ ಉಡುಗೆ ತೊಡುಗೆಗಳನ್ನು ಧರಿಸುವದರೊಂದಿಗೆ ಕೇಕೆ ಹಾಕಿ ಬೇಡು ಹಬ್ಬ ಆಚರಣೆ ಸಾರ್ವಜನಿಕರನ್ನು ಆಕರ್ಷಿಸಿತು.