ಮಡಿಕೇರಿ, ಮೇ 23: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ತಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೂಜೆ-ಪ್ರಾರ್ಥನೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರೆ, ಬಿಜೆಪಿ ಕಾರ್ಯಕರ್ತರು ಅಪವಿತ್ರ ಮೈತ್ತಿ ಸರಕಾರ ರಚನೆಯಾಗಿದೆ ಎಂದು ಆರೋಪಿಸಿ ಕರಾಳ ದಿನ ಆಚರಿಸಿದರು.
ಬೆಳಿಗ್ಗೆ ಜೆಡಿಎಸ್ನ ರಾಜ್ಯ ಉಪಾಧ್ಯಕ್ಷ ಡಾ. ಯಾಲದಾಳು ಮನೋಜ್ ಬೋಪಯ್ಯ ಬಣದ ಕಾರ್ಯಕರ್ತರು ದೇವಾಲಯ, ಮಸೀದಿ, ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಸಂಜೆ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಬಣದ ಕಾರ್ಯಕರ್ತರು ಜ. ತಿಮ್ಮಯ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ, ಜಯಕಾರ ಹಾಕುತ್ತಾ ವಿಜಯೋತ್ಸವ ಆಚರಿಸಿದರು. ನಗರದೊಳಗಡೆ ಎರಡು ತಂಡಗಳಾಗಿ ಬೇರೆ ಬೇರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.
ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಜೆಡಿಎಸ್ ಉಸ್ತುವಾರಿ ಡಾ. ಮನೋಜ್ ಬೋಪಯ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಕಾಣಲಿ ಮತ್ತು ಎಲ್ಲಾ ಧರ್ಮಗಳು ಸೌಹಾರ್ದದಿಂದ ಬಾಳಲಿ, ಕಾವೇರಿ ನೀರು ಸಮಸ್ಯೆ, ಕಸ್ತೂರಿ ರಂಗನ್, ಜಮ್ಮಾ ಬಾಣೆ ಸಮಸ್ಯೆ, ಆನೆ ಮಾನವ ಸಂಘರ್ಷ ಸಮಸ್ಯೆಗಳು ಇವರ ಅಧಿಕಾರ ಅವಧಿಯಲ್ಲಿ ಪರಿಹಾರ ವಾಗಲಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬರಲಿ ಎಂದು ಕೊಡಗು ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು, ಕಾರ್ಯಕರ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ನಗರದ ಶ್ರೀ ಓಂಕಾರೇಶ್ವರ ದೇವಾಲಯ, ಸಂತ ಮೈಕಲರ ಚರ್ಚ್ ಹಾಗೂ ಮಹದೇವಪೇಟೆಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ತಿರುಮಲ ಸೋನ, ಕಾರ್ಯದರ್ಶಿ ಯಕ್ಷಿತ್ ಕೊತ್ತೋಳಿ, ಸಾಮಾಜಿಕ ಜಾಲತಾಣ ಸಂಚಾಲಕಿ ಶಿಶಿರ ಅಪ್ಪಯ್ಯ, ಯಾಲದಾಳು ರಂಜನ್ ಬೋಪಯ್ಯ, ಯಾಲದಾಳು ಯಾದವ, ಹಂಸ ರಾವುತರ್, ಮೇರಿ ಕ್ಲಾರಾ, ಕರ್ಕರನ ಮೋಹನ್, ಕೋಚನ ರವಿ, ಕರ್ಕರನ ರಾಮಯ್ಯ, ಕೂಡಕಂಡಿ ಮಿಟ್ಟು, ಚೆರಿಯಮನೆ ನಿತಿನ್, ವೈ.ಟಿ. ಧನಂಜಯ, ಮೊಹಮ್ಮದ್ ಅಬ್ರಹಾರ್, ಮೂವನ ಸುರೇಶ ಹಾಜರಿದ್ದರು.
ವಿಜಯೋತ್ಸವದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಶೇಷಮ್ಮ, ಯುವ ಘಟಕದ ಅಧ್ಯಕ್ಷ ರವಿಕಿರಣ, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕರಾಳ ದಿನಾಚರಣೆ : ಜೆಡಿಎಸ್ ಕಾರ್ಯಕರ್ತರು ಮಂದಿರ, ಮಸೀದಿಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರೆ ಇತ್ತ ಬಿಜೆಪಿ ಕಾರ್ಯಕರ್ತರು ಜ. ತಿಮ್ಮಯ್ಯ ವೃತ್ತದಲ್ಲಿ ಮೈತ್ರಿ ಸರಕಾರವನ್ನು ವಿರೋಧಿಸಿ ಕರಾಳ ದಿನವನ್ನಾಗಿ ಆಚರಿಸಿ ಪ್ರತಿಭಟಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಜನತೆ ಬಿಜೆಪಿಗೆ ಜನಾದೇಶ ನೀಡಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಜನಾದೇಶವನ್ನು ತಿರಸ್ಕರಿಸಿ ಅಪವಿತ್ರ ಮೈತ್ತಿ ಮಾಡಿಕೊಂಡಿದೆ. ಆ ಎರಡು ಪಕ್ಷಗಳಿಗೆ ಅಭಿವೃದ್ಧಿ ಕೆಲಸಗಳಾಗ ಬೇಕಾಗಿಲ್ಲ. ಬಿಜೆಪಿಯಿಂದ ಅಭಿವೃದ್ಧಿ ಯಾಗಲಿದೆ ಎಂಬ ಕಾರಣಕ್ಕಾಗಿ ಬಿಜೆಪಿಯನ್ನು ದೂರವಿರಿಸಿ ಮೈತ್ರಿ ಮಾಡಿಕೊಂಡಿವೆ. ಈ ಸರಕಾರ ಹೆಚ್ಚು ಕಾಲ ನಿಲ್ಲುವದಿಲ್ಲವೆಂದು ಹೇಳಿದರು. ಜನಾದೇಶಕ್ಕೆ ದ್ರೋಹ ವೆಸಗಿರುವ ಅಪವಿತ್ರ ಮೈತ್ತಿ ಸರಕಾರ ಶೀಘ್ರದಲ್ಲಿ ಪತನ ಕಾಣಲಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ರವಿಕುಶಾಲಪ್ಪ, ಬಾಲಚಂದ್ರ ಕಳಗಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ನಗರಾಧ್ಯಕ್ಷ ಮಹೇಶ್ ಜೈನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನ ಚಂಗಪ್ಪ, ನಗರ ಕಾರ್ಯದರ್ಶಿ ಬಿ.ಕೆ. ಜಗದೀಶ್, ಎ.ಪಿ.ಎಂ.ಸಿ. ಅಧ್ಯಕ್ಷ ಕಾಂಗಿರ ಅಶ್ವಿನ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ರವಿಬಸಪ್ಪ, ಉಣ್ಣಿಕೃಷ್ಣ, ಲಕ್ಷಿ, ಮೋಂತಿ ಗಣೇಶ್, ಮಿನಾಜ್ಪ್ರವೀಣ್, ಮನುಮಹೇಶ್, ಅಪ್ಪಣ್ಣ, ಸತೀಶ್ ಕುಮಾರ್ ಇನ್ನಿತರರಿದ್ದರು.
ಸೋಮವಾರಪೇಟೆ : ಅತಂತ್ರ ವಿಧಾನ ಸಭೆ ಹಿನ್ನೆಲೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಗೊಂಡು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಿಸಿದರು.
ಜೆಡಿಎಸ್ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಜೆಡಿಎಸ್ ಕಾರ್ಯಕರ್ತರೊಂದಿಗೆ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸೇರಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಮಡಿಕೇರಿ ಕ್ಷೇತ್ರ ಸಮಿತಿ ಜೆಡಿಎಸ್ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ಚುನಾವಣಾ ಅಕ್ರಮ ಹಾಗೂ ಹಣ ಬಲದಿಂದ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿದ ಬಿಜೆಪಿ, ಸರ್ಕಾರ ರಚಿಸುವಷ್ಟು ಸ್ಥಾನವನ್ನು ಪಡೆಯದಿದ್ದಾಗ ಕುದುರೆ ವ್ಯಾಪಾರಕ್ಕೆ ಮುಂದಾದ ಬಿಜೆಪಿಯ ತಂತ್ರವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ವಿಫಲ ಗೊಳಿಸಿದ್ದಾರೆ. ರಾಜ್ಯದಲ್ಲಿ ಜನಪರ ಆಡಳಿತವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೀಡಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಎಚ್.ಸಿ.ನಾಗೇಶ್ ಮಾತನಾಡಿ, ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 2 ರೂ. ಏರಿಕೆಯಾದಾಗ, ರಾಜ್ಯದ ಬಿಜೆಪಿ ನಾಯಕರು ಕುದುರೆ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಬೆಲೆ ದಿನಂಪ್ರತಿ ಏರಿಕೆಯಾಗುತ್ತಿದೆ. ಈಗ ಬಿಜೆಪಿಯವರು ಕತ್ತೆ ಮೇಲೆ ಕುಳಿತು ತೆರಳಲಿ ಎಂದು ಟೀಕಿಸಿದರಲ್ಲದೇ, ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಗಳನ್ನೂ ಜಾತ್ಯತೀತ ಪಕ್ಷಗಳು ಒಟ್ಟಾಗಿ ಸೇರಿ ಎದುರಿಸಿ, ಬಿಜೆಪಿಯನ್ನು ದೇಶದಲ್ಲಿ ನಾಶ ಮಾಡಬೇಕು ಎಂದರು.
ಜೆಡಿಎಸ್ ಪ್ರಮುಖರಾದ ಎಸ್.ಎಂ.ಡಿಸಿಲ್ವಾ, ಎ.ಪಿ.ವೀರರಾಜು, ಜಾನಕಿ ವೆಂಕಟೇಶ್, ಪವಿತ್ರ ದೇವೇಂದ್ರ, ಕಮಲ್, ಡಿ.ಎಸ್.ಚಂಗಪ್ಪ, ಪ್ರವೀಣ್, ರಫೀಕ್, ಕಾಂಗ್ರೆಸ್ನ ಲಾರೆನ್ಸ್, ಕೆ.ಎ.ಆದಂ, ಶೀಲಾ ಡಿಸೋಜ, ಬಿ.ಇ. ಜಯೇಂದ್ರ ಮತ್ತಿತರು ಉಪಸ್ಥಿತರಿದ್ದರು.
ಸೋಮವಾರಪೇಟೆ : ಬಿಜೆಪಿಗೆ ಹೆಚ್ಚಿನ ಜನಾದೇಶವಿದ್ದರೂ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿರುವದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಕರಾಳ ದಿನ ಆಚರಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಧಾನಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಯಡಿಯೂರಪ್ಪ ಅವರು, ವಚನ ಭ್ರಷ್ಟ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರವರ ಷಡ್ಯಂತ್ರದಿಂದ ರಾಜೀನಾಮೆ ನೀಡಬೇಕಾಯಿತು. ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಧಿಕಾರಕ್ಕೇರಿದ್ದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸುವ ಮೂಲಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಸರ್ಕಾರ ಹೆಚ್ಚು ಸಮಯ ಅಧಿಕಾರದಲ್ಲಿರುವದಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಯಡಿಯೂರಪ್ಪ ರವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವದು ನಿಶ್ಚಿತ ಎಂದರು.
ಪಕ್ಷದ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಯಾವದೇ ಕಾರಣಕ್ಕೂ ಬಿಜೆಪಿ ಹಾಗೂ ಕಾಂಗ್ರೆಸ್ನೊಂದಿಗೆ ಮೈತ್ರಿ ಸರ್ಕಾರ ರಚಿಸುವದಿಲ್ಲ, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಮತ ಎಣಿಕೆ ನಡೆಯುವ ಸಂದರ್ಭವೇ ಕಾಂಗ್ರೆಸ್ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿರುವದು ರಾಜ್ಯದ ದುರಂತ. ಮೈತ್ರಿ ಸರ್ಕಾರ ಮೂರರಿಂದ ಆರು ತಿಂಗಳೊಳಗೆ ಮುರಿದು ಬೀಳಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಬಿಜೆಪಿ ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ, ವಕ್ತಾರ ಕೆ.ಜಿ. ಸುರೇಶ್, ತಾ.ಪಂ. ಸದಸ್ಯೆ ತಂಗಮ್ಮ, ಪಕ್ಷದ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್, ಯುವ ಮೋರ್ಚಾ ನಗರಾಧ್ಯಕ್ಷ ಶರತ್ ಚಂದ್ರ, ಪ್ರಮುಖರಾದ ಪಿ. ಮಧು, ಹರಗ ಉದಯ, ಚೇತನ್, ಜಗದೀಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ವೀರಾಜಪೇಟೆ : ಕಾಂಗ್ರೆಸ್ ಜೆಡಿಎಸ್ನ ಸಮ್ಮಿಶ್ರ ಸರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಿದೆ.ಈ ಸಮ್ಮಿಶ್ರ ಸರಕಾರಕ್ಕೆ ಐದು ವರ್ಷಗಳ ಪೂರ್ಣಾವಧಿಯ ಭವಿಷ್ಯವಿದೆ. ಜಾತ್ಯತೀತವಾಗಿ ಪ್ರತಿಯೊಂದು ವರ್ಗದ ಜನತೆ ಸೇರಿದಂತೆ ಕಡು ಬಡವರು, ಅಲ್ಪ ಸಂಖ್ಯಾತರಿಗೂ ಸಮ್ಮಿಶ್ರ ಸರಕಾರ ಸಹಾಯ ಹಸ್ತ ನೀಡಲಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜನತಾ ದಳ ಪಕ್ಷದ ಅಧ್ಯಕ್ಷ ಎಸ್.ಎಚ್.ಮತೀನ್ ಹೇಳಿದರು.
ಜೆ.ಡಿ.ಎಸ್. ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಪಕ್ಷದ ಕ್ಷೇತ್ರ ಹಾಗೂ ನಗರ ಸಮಿತಿಯಿಂದ ಇಲ್ಲಿನ ಗಡಿಯಾರ ಕಂಬದ ಬಳಿ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಮತೀನ್ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದರು.
ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ ನಿರೀಕ್ಷೆಯಂತೆ ಜನತಾ ದಳ ಪಕ್ಷದ ನಾಯಕ ಕುಮಾರಸ್ವಾಮಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ. ಕುಮಾರಸ್ವಾಮಿ ಅವರು ಈ ಹಿಂದಿನಂತೆಯೇ ರೈತರು, ಕಾರ್ಮಿಕ ವರ್ಗ ಬಡವರ ಮೇಲೆ ಕಾಳಜಿಯನ್ನು ಹೊಂದಿ ಪ್ರಗತಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಪಕ್ಷದ ಕಾರ್ಯಕರ್ತರುಗಳಾದ ಅಮ್ಮಂಡ ವಿವೇಕ್, ಪಿ.ಎ.ನಾಸರ್, ನೂರ್ ಅಹಮ್ಮದ್, ಅಯಾಜ್, ಅಯೂಬ್, ರಂಜನ್ ನಾಯ್ಡು, ಮಹಿಳಾ ಘಟಕದ ವೀಣಾ, ಸುಮಿತ್ರ, ಕಮಲಾ, ಸರಸು ಮತ್ತಿತರ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ವೀರಾಜಪೇಟೆ : ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ರಚಿಸಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಪವಿತ್ರ ಮೈತ್ರಿಯ ಸರಕಾರ ರಚನೆಯನ್ನು ವಿರೋಧಿಸಿ ಕರಾಳದಿನವನ್ನಾಗಿ ಆಚರಿಸಿ ಇಲ್ಲಿನ ಗಡಿಯಾರ ಕಂಬದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿ.ಜೆ.ಪಿ.ಯ ತಾಲೂಕು ಹಾಗೂ ನಗರ ಸಮಿತಿಯಿಂದ ಆಯೋಜಿಸಲಾದ ಪ್ರತಿಭಟನೆಯಲ್ಲಿ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ತಾಲೂಕು ಸಮಿತಿ ಅಧ್ಯಕ್ಷ ಕೆ.ಅರುಣ್ ಭೀಮಯ್ಯ ಕಾಂಗ್ರೆಸ್ ಪಕ್ಷದ ದುರಾಡಳಿತ, ಸ್ವಜನ ಪಕ್ಷಪಾತ, ಧರ್ಮ ಧರ್ಮಗಳ ನಡುವೆ ವಿವಾದದ ಕಂದಕ ನಿರ್ಮಾಣದಿಂದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ಎರಡನೇ ಸ್ಥಾನದಲ್ಲಿದ್ದರೂ ಚುನಾವಣೆಗೆ ಮುನ್ನ ಜೆಡಿಎಸ್ನ್ನು ವಿರೋಧ ಪಕ್ಷ ಎಂದು ಬಿಂಬಿಸಿ ನಂತರ ಜೆಡಿಎಸ್ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚನೆಗೆ ಮುಂದಾ ಗಿರುವದನ್ನು ರಾಜ್ಯದ ಜನತೆ ವಿರೋಧಿಸಿದೆ. ಈ ಸರಕಾರವನ್ನು ತಿರಸ್ಕರಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಾಫಿ ಮಂಡಳಿಯ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಣಿ ನಂಜಪ್ಪ, ಶಶಿ ಸುಬ್ರಮಣಿ ಅನಿಲ್ ಮಂದಣ್ಣ, ಸುವಿನ್ ಗಣಪತಿ, ಬಿ.ಎಂ. ಕುಮಾರ್, ಯೋಗೀಶ್ ನಾಯ್ಡು, ಆಶಾ ಸುಬ್ಬಯ್ಯ ಮತ್ತಿತರ ಕಾರ್ಯಕರ್ತರುಗಳು ಹಾಜರಿದ್ದರು.
ಕುಶಾಲನಗರ : ರಾಜ್ಯದ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಸೇರಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವದರೊಂದಿಗೆ ವಿಜಯೋತ್ಸವ ಆಚರಿಸಿದರು.
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್, ಸದಸ್ಯರಾದ ಹೆಚ್.ಡಿ.ಚಂದ್ರು, ಸುರಯ್ಯ ಭಾನು, ಜಿಲ್ಲಾ ಯುವಜನತಾದಳ ಪ್ರಮುಖರಾದ ವಿ.ಪಿ.ಸುಖೇಶ್, ನಗರಾಧ್ಯಕ್ಷ ವಿ.ಎಸ್.ಆನಂದ್ ಮತ್ತಿತರರು ಇದ್ದರು.
ನಾಪೆÉÇೀಕ್ಲು : ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ನಾಯಕ ಕುಮಾರ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಡಾ. ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಾಪೆÉÇೀಕ್ಲು ಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ, ಹಿರಿಯ ಸದಸ್ಯ ಬೊಪ್ಪೇರ ಕಾವೇರಪ್ಪ, ಕಾಂಗ್ರೆಸ್ ವಲಯ ಅಧ್ಯಕ್ಷ ಕುಸು ಕುಶಾಲಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಖುರೇಶಿ, ಪಿ.ಎಂ. ರಷೀದ್, ಟಿ.ಎ.ಮಹಮ್ಮದ್, ಮಹಮ್ಮದ್ ಕುಂಙ, ಎಂ.ಎಸ್. ಇಬ್ರಾಹಿಂ, ಆಸಿಫ್, ಅಬುಬಕರ್, ಮಜೀದ್, ಎಂ.ಎಂ. ಅಬುಬಕರ್, ಆಚಾರಿ ದೇವಪ್ಪ, ಮತ್ತಿತರರು ಇದ್ದರು.
ಸಿದ್ದಾಪುರ : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ, ನೆಲ್ಯಹುದಿಕೇರಿ ಜೆಡಿಎಸ್ ಸ್ಥಾನಿಯ ಸಮಿತಿ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಲಿಂಗು, ಶಿವದಾಸ್, ಬಾವ, ರಿಯಾಸ್ ಶಿಹಾಬುದ್ದೀನ್, ಸುಕೂರ್ ಮತ್ತಿತರರು ಹಾಜರಿದ್ದರು.