ಮಡಿಕೇರಿ, ಮೇ 24: ಕಳೆದ ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತಂತೆ ತೀವ್ರ ವಿವಾದ ಮೂಡಿಸಿದ್ದ ಮಡಿಕೇರಿ ಟಿಪ್ಪು ಜಯಂತಿ ಸಂದರ್ಭದ ಗಲಭೆ ಮತ್ತು ಘಟನೆಯಲ್ಲಿ ಮೃತಪಟ್ಟಿದ್ದ ಕುಟ್ಟಪ್ಪ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಮಾಡಲಾಗಿದ್ದ ಆರೋಪಗಳಿಂದ ಅವರನ್ನು ಗೃಹ ಇಲಾಖೆ ಮುಕ್ತಗೊಳಿಸಿದೆ. ಅಲ್ಲದೆ ಇವರ ವಿರುದ್ಧ ಇಲಾಖೆ ವಿಚಾರಣೆ ನಡೆಸದಿರಲು ಹಿಂದಿನ ಸರಕಾರ ತೀರ್ಮಾನಿಸಿದೆ. ಟಿಪ್ಪು ಜಯಂತಿ ಸಂದರ್ಭದಲ್ಲಿ ಸಂಭವಿಸಿದ್ದ ಗಲಭೆ ವೇಳೆಯಲ್ಲಿ ಕರ್ತವ್ಯದಲ್ಲಿ ಉದಾಸೀನತೆ, ಅಜಾಗರೂಕತೆಯಿಂದ ವರ್ತಿಸದೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅಲ್ಪಾವಧಿಯಲ್ಲಿ ಕೈಗೊಂಡಿದ್ದರು ಎಂದು ಸರ್ಕಾರ ಹೇಳಿದ್ದು, ಕಳೆದ ಏಪ್ರಿಲ್ 26ರಂದು ಈ ಆದೇಶ ಹೊರಬಿದ್ದಿರುವದು ‘ಶಕ್ತಿ’ಗೆ ತಿಳಿದುಬಂದಿದೆ. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರು ನಡೆಸಿದ್ದ ಮ್ಯಾಜಿಸ್ಟೀರಿಯಲ್ ತನಿಖೆ ವರದಿ ಆಗಿನ ಎಸ್.ಪಿ. ವರ್ತಿಕಾ ಕಟಿಯಾರ್ ಮತ್ತು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಸೇರಿದಂತೆ ಪೊಲೀಸ್ ಇಲಾಖೆಯ ಇನ್ನಿತರ ಅಧಿಕಾರಿಗಳ ಉದಾಸೀನತೆ, ಕರ್ತವ್ಯ ಲೋಪವನ್ನು ಸಾಬೀತುಪಡಿಸಿತ್ತು. ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಅಲ್ಲದೆ ಮಡಿಕೇರಿಯಲ್ಲಿ ನಡೆದ ಕೋಮು ಘರ್ಷಣೆಗೆ ಕೊಡಗು ಜಿಲ್ಲಾಡಳಿತವೇ ಹೊಣೆ ಎಂದು ದಕ್ಷಿಣ ವಲಯದ ಐಜಿಪಿ

ಬಿ.ಕೆ. ಸಿಂಗ್ ಅವರು ಅಂದಿನ ಡಿಜಿಪಿ ಓಂಪ್ರಕಾಶ್

(ಮೊದಲ ಪುಟದಿಂದ) ಅವರಿಗೆ 12 ಪುಟಗಳ ಆಂತರಿಕ ವರದಿ ಸಲ್ಲಿಸಿದ್ದರು. ಇದೀಗ ಈ ತನಿಖಾ ವರದಿಯಲ್ಲಿ ಕಂಡುಬಂದಿದ್ದ ಅಂಶಗಳನ್ನು ಗೃಹ ಇಲಾಖೆ ಬದಿಗೆ ಸರಿಸಿದೆ. ವರ್ತಿಕಾ ಕಟಿಯಾರ್ ಅವರು ನೀಡಿದ್ದ ಸಮಜಾಯಿಷಿಕೆಯನ್ನು ಗೃಹ ಇಲಾಖೆ ಎತ್ತಿ ಹಿಡಿದಿದೆ. ವರ್ತಿಕಾ ಕಟಿಯಾರ್ ಅವರನ್ನು ಆರೋಪ ಮುಕ್ತಗೊಳಿಸಿರುವ ಕುರಿತು ಗೃಹ ಇಲಾಖೆ ಏಪ್ರಿಲ್ 26, 2018ರಂದು ಆದೇಶ ಹೊರಡಿಸಿದೆ.

ಏನಾಗಿತ್ತು...?

ವರ್ತಿಕಾ ಕಟಿಯಾರ್ ಅವರು ನವೆಂಬರ್ 8,2015ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಶಕ್ತಿ ಮೀರಿ ಪ್ರಯತ್ನಿಸಿರುವದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ ಜನರ ಗುಂಪಿನಲ್ಲಿ ಹೋಗಿ ಸಂಧಾನ ನಡೆಸಿದ್ದಾರೆ. ಇವರಿಗೆ ಲಭ್ಯವಾದ ಎಲ್ಲಾ ಸಿಬ್ಬಂದಿಗಳನ್ನು ಸೂಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಪರಿಸ್ಥಿತಿ ನಿಯಂತ್ರಿಸಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿರುವದು ದೃಢಪಟ್ಟಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ತನಿಖಾ ವರದಿ ಏನು ಹೇಳಿತ್ತು?

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ನೀಡಿದ್ದ ಅಧಿಕಾರವನ್ನು ಪರಿಸ್ಥಿತಿಗೆ ಅನುಗುಣವಾಗಿ ಬಳಸಿಕೊಳ್ಳಲು ಅವಕಾಶವಿದ್ದರೂ ಸಹ ಪೊಲೀಸ್ ವರಿಷ್ಠಾಧಿಕಾರಿ, ಠಾಣಾಧಿಕಾರಿಗಳು, ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಚಲಾಯಿಸದೇ ವಿಫಲರಾಗಿದ್ದರು. ಈ ಮೂಲಕ ಉದಾಸೀನತೆಯನ್ನು ತೋರಿದ್ದಾರೆ ಎಂದು ಮ್ಯಾಜಿಸ್ಟೀರಿಯಲ್ ವರದಿ ಹೇಳಿತ್ತು.

ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿತ್ತಲ್ಲದೆ, ಜಿಲ್ಲಾಧಿಕಾರಿಯಾಗಿದ್ದ ಮೀರ್ ಅನೀಸ್ ಅಹ್ಮದ್ ಮತ್ತು ವರ್ತಿಕಾ ಕಟಿಯಾರ್ ಅವರಿಗೆ ಕರ್ತವ್ಯದಲ್ಲಿ ಉದಾಸೀನತೆ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿತ್ತು. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಅವರನ್ನು ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ನಿಯೋಜಿಸಲಾಗಿತ್ತು.

ಸೋಮವಾರಪೇಟೆಯ ಇಗ್ಗೋಡ್ಲು ಗ್ರಾಮದ ಕುಟ್ಟಪ್ಪ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ, ಮಡಿಕೇರಿಯಲ್ಲಿ ನಡೆದ ಘಟನೆಗಳ ಬಗ್ಗೆ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆಗಳ ವಿವರಗಳು ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳ ವಿಚಾರಣೆ, ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆ ಬಗ್ಗೆ ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಡಳಿತ ಕೈಗೊಂಡಿದ್ದ ಕ್ರಮಗಳ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಿತ್ತು.

ವರ್ತಿಕಾ ಸಮಜಾಯಿಷಿಕೆ

ಟಿಪ್ಪು ಜಯಂತಿ ಆಚರಣೆ ಕುರಿತು ಶಾಂತಿ ಸಮಿತಿ ಸಭೆ ಕರೆಯಲಾಗಿತ್ತು. ಸಭೆಗೆ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕರನ್ನು ಆಹ್ವಾನಿಸಲಾಗಿತ್ತು. ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಲು ಕೋರಲಾಗಿತ್ತು. ನವೆಂಬರ್ 9, 2015ರಂದು ರಾತ್ರಿ 11.15ಕ್ಕೆ ಎಸ್‍ಡಿಪಿಐ ಮುಖಂಡ ಫಜಲುಲ್ಲಾ ಅವರನ್ನು ಕಾವೇರಿ ಕಲಾಕ್ಷೇತ್ರಕ್ಕೆ ಆಹ್ವಾನಿಸಿ, ಯಾವದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಈ ಸಂಬಂಧ ಪ್ರತಿಯೊಂದು ಆಗು- ಹೋಗುಗಳ ಬಗ್ಗೆ ರಜೆಯಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ವರ್ತಿಕಾ ಕಟಿಯಾರ್ ಅವರು ಸಮಜಾಯಿಷಿಕೆ ನೀಡಿದರು.

ನವೆಂಬರ್ 10, 2015ರ ಬೆಳಿಗ್ಗೆ 7.45ಕ್ಕೆ ದೂರವಾಣಿ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಕುಶಾಲನಗರದ ಕೊಪ್ಪ ಗೇಟನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದರು. ಆದರೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಗೇಟ್ ಮುಚ್ಚದೇ ಇರುವದು ಕಂಡು ಬಂದಿತ್ತು. ಅದೇ ದಿನ ಬೆಳಿಗ್ಗೆ 9.45ಕ್ಕೆ ಮತ್ತೊಂದು ದೂರವಾಣಿ ಕರೆ ಬಂದಿದ್ದು, ಮರಗೋಡಿನಲ್ಲಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಗಲಾಟೆಯಾಗಿ ಕಲ್ಲು ತೂರಾಟ ನಡೆದಿದೆ ಎಂದು ಹೇಳಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಗುಂಪನ್ನು ಚದುರಿಸಲಾಗಿತ್ತು. ಮಡಿಕೇರಿಯ ಎಂ.ಎಂ. ವೃತ್ತ ಮತ್ತು ಜನರಲ್ ತಿಮ್ಮಯ್ಯ ವೃತ್ತಗಳಲ್ಲಿದ್ದ ಗುಂಪನ್ನು ಚದುರಿಸಲಾಗಿತ್ತು ಎಂದು ಹೇಳಿರುವದು ಸಮಜಾಯಿಷಿಕೆಯಿಂದ ಗೊತ್ತಾಗಿದೆ.

ಇಡೀ ಜಿಲ್ಲೆಯೇ ಬೂದಿಮುಚ್ಚಿದ ಕೆಂಡದಂತಿದ್ದು, ಇಂತಹ ಸೂಕ್ಷ್ಮ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹವಣಿಸಿದ್ದವು. ಅಸ್ವಾಭಾವಿಕ ಮರಣ ಸಹಿತ ಕೋಮುಗಲಭೆಗಳನ್ನಾಗಿ ಮಾಡಲು ಪ್ರಯತ್ನಗಳು ನಡೆದಿತ್ತು. ಅತ್ತಿಮಂಗಲದಲ್ಲಿ ನಡೆದಿದ್ದ ಮತ್ತು ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಅಸ್ವಾಭಾವಿಕ ಮರಣ ಘಟನೆಗಳು ಉದಾಹರಣೆಗಳಾಗಿವೆ. ಒಂದು ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಿಸಿ 100ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಕುಟ್ಟಪ್ಪ ಮತ್ತು ಸಾಹುಲ್ ಹಮೀದ್ ಪ್ರಕರಣಗಳನ್ನು ಸೂಕ್ತವಾಗಿ ವಿಚಾರಣೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿತ್ತು ಎಂದು ವರ್ತಿಕಾ ಅವರು ವಿವರಿಸಿದ್ದಾರೆ.

8ನೇ ಆಲ್ ಇಂಡಿಯಾ ಪೊಲೀಸ್ ಬ್ಯಾಡ್ಮಿಂಟನ್ ಶಿಪ್ ರಾಜ್ಯದ ಪ್ರತಿನಿಧಿಯಾಗಿ ಡಿಜಿಪಿ ಅನುಮತಿಯೊಂದಿಗೆ ಹೋಗಿದ್ದೆ. ದೆಹಲಿಗೆ ಹೋಗುವ ಮುನ್ನ 3 ಉಪ ವಿಭಾಗಗಳ ಡಿವೈಎಸ್ಪಿಗಳಿಗೆ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿತ್ತು. ಎಂದು ಸಮಜಾಯಿಷಿಕೆಯಲ್ಲಿ ತಿಳಿಸಿದ್ದಾರೆ.

ಈ ಸಮಜಾಯಿಷಿಕೆಯನ್ನು ಪರಿಶೀಲಿಸಿದ್ದ ಗೃಹ ಮತ್ತು ಆಡಳಿತ ಇಲಾಖೆ ಟಿಪ್ಪು ಜಯಂತಿ ಘಟನೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜೀವದ ಹಂಗು ತೊರೆದು ಸಮರ್ಥವಾಗಿ ಕಾರ್ಯನಿರ್ವಹಿಸಿರುವದು ಕಂಡು ಬಂದಿದೆ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಯಾವದೇ ಸಮರ್ಥನೀಯ ಕಾರಣಗಳು ಕಂಡು ಬರುತ್ತಿಲ್ಲ. ಇವರ ವಿರುದ್ಧ ಶಿಸ್ತು ವಿಚಾರಣೆ ನಡೆಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಅಭಿಪ್ರಾಯ ತಳೆದಿದೆ.

ಈ ಹಿನ್ನೆಲೆಯಲ್ಲಿ ವರ್ತಿಕಾ ವಿರುದ್ಧ ಇಲಾಖಾ ವಿಚಾರಣೆ ನಡೆಸುವದು ಸೂಕ್ತವಲ್ಲವೆಂದು ಪರಿಗಣಿಸಿ ಅವರ ವಿರುದ್ಧ ಮಾಡಲಾಗಿರುವ ಆರೋಪಗಳಿಂದ ಮುಕ್ತಗೊಳಿಸಲಾಗಿದೆ ಎಂದು ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ)ಯ ಸರಕಾರದ ಉಪಕಾರ್ಯದರ್ಶಿ ಬಿ.ಯಸ್. ನಾಗರಾಜ್ ಅವರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.