ಇಂದು ಹೆಚ್‍ಡಿಕೆ ವಿಶ್ವಾಸಮತ ಯಾಚನೆ

ಬೆಂಗಳೂರು, ಮೇ 24: ಇಂದು ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಗರದ ರೆಸಾರ್ಟ್‍ವೊಂದರಲ್ಲಿ ಇರಿಸಲಾಗಿದೆ. ಚುನಾವಣೆಯಲ್ಲಿ ಆತಂತ್ರ ಫಲಿತಾಂಶ ದೊರೆತ ನಂತರ ಕಳೆದ ಒಂಬತ್ತು ದಿನಗಳಿಂದಲೂ ಶಾಸಕರು ಅವರ ಕುಟುಂಬದಿಂದ ದೂರ ಉಳಿದಿದ್ದಾರೆ. ದೊಮ್ಮಲೂರಿನ ಹಿಲ್ಟನ್ ಎಂಬೆಸಿ ಗಲ್ಪ್ ಲಿಂಕ್ಸ್‍ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದರೆ, ನಗರದ ಹೊರವಲಯ ದೇವನಹಳ್ಳಿಯ ಪ್ರಸ್ಟಿಜ್ ಗಲ್ಪ್ ಸೈರ್‍ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ವಿಶ್ವಾಸಮತ ಯಾಚನೆವರೆಗೂ ಶಾಸಕರು ರೆಸಾರ್ಟ್‍ನಲ್ಲಿ ಇರುತ್ತಾರೆ. ಬಳಿಕ ಅವರ ಕುಟುಂದವರೊಂದಿಗೆ ಸೇರುತ್ತಾರೆ. ನಮ್ಮ ಶಾಸಕರ ನಂಬಿಕೆ ಮೇಲೆ ತಪ್ಪಾದ ಅನಿಸಿಕೆ ವ್ಯಕ್ತಪಡಿಸಲಾಗುತ್ತಿದೆ. ಪಕ್ಷದ ನಿರ್ಧಾರವನ್ನು ಎಲ್ಲರೂ ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಶಾಸಕರ ಮೊಬೈಲ್ ಪೆÇೀನ್ ಕೂಡಾ ವಶಪಡಿಸಿಕೊಂಡಿದ್ದು, ಹೊರ ಜಗತ್ತಿನ ಸಂಪರ್ಕವೇ ಸಿಗದಂತೆ ಮಾಡಲಾಗಿದೆ. ಅವರಿಂದಲೇ ಪಡೆದು ಮನೆಯವರ ಜೊತೆ ಮಾತನಾಡಲಾಗುತ್ತದೆ. ವಿಶ್ವಾಸ ಮತ ಯಾಚನೆ ವೇಳೆ ಹೊಸ ಸರ್ಕಾರವನ್ನು ಬೀಳಿಸಲಾಗುತ್ತದೆ ಎಂದು ಕೆಲವರು ವದಂತಿ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ-ಶಿವಸೇನೆಗೆ ತಲಾ 2 ಸ್ಥಾನ

ಮುಂಬೈ, ಮೇ 24: ಮಹಾರಾಷ್ಟ್ರ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದು ಎನ್‍ಸಿಪಿ ಒಂದು ಸ್ಥಾನವನ್ನು ಉಳಿಸಿಕೊಂಡಿದೆ. ಸೋಮವಾರ ಮಹಾರಾಷ್ಟ್ರದ ವಿಧಾನ ಪರಿಷತ್‍ನ 6 ಸ್ಥಳೀಯ ಸಂಸ್ಥೆ ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಪೈಕಿ 5 ಸ್ಥಾನಗಳ ಮತ ಎಣಿಕೆ ತಾ. 24 ರಂದು ನಡೆದಿದ್ದು, ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಶಿವಸೇನೆ ತಾನು ಸ್ಪರ್ಧಿಸಿದ್ದ 3 ಸ್ಥಾನಗಳ ಪೈಕಿ 2 ಅನ್ನು ಗೆದ್ದಿದ್ದು ಸುಧಾರಣೆ ಕಂಡಿದೆ. ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡು 5 ಪೈಕಿ 4 ಗೆದ್ದಿದ್ದರೆ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎನ್‍ಸಿಪಿ ಒಂದು ಸ್ಥಾನದಲ್ಲಿ ಗೆದ್ದಿದೆ, ಅಮ್ರಾವತಿ ಹೊರತುಪಡಿಸಿ ವಾರ್ಧಾ-ಚಂದ್ರಪುರ-ಗಡ್ಚಿರೋಲಿ ಸ್ಥಾನಗಳನ್ನು ಪಡೆದಿದ್ದು, ಶಿವಸೇನೆ ನಾಸಿಕ್, ಪರ್ಭಾನಿ-ಹಿಂಗೋಲಿಯಲ್ಲಿ ಗೆಲುವು ಸಾಧಿಸಿದೆ. ಎನ್‍ಸಿಪಿ ರಾಯ್ಗಡ್-ರತ್ನಗಿರಿ-ಸಿಂಧುದುರ್ಗ ಸ್ಥಾನವನ್ನು ಉಳಿಸಿಕೊಂಡಿದೆ.

ನಿಫಾ ವೈರಾಣು ಸಾಂಕ್ರಾಮಿಕ ರೋಗವಲ್ಲ

ನವದೆಹಲಿ, ಮೇ 24: ಕೇರಳದಲ್ಲಿ 11 ಜನರನ್ನು ಬಲಿಪಡೆದಿರುವ ನಿಫಾ ವೈರಾಣು ಸಾಂಕ್ರಾಮಿಕ ರೋಗವಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ. ಡಾಕ್ಟರನ್ನೊಳಗೊಂಡ ಕೇಂದ್ರ ತಂಡ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಹತ್ತಿರದಿಂದಲೇ ಗಮನಿಸುತ್ತಿದೆ. ಇದು ಸ್ಥಳೀಯವಾಗಿದ್ದು, ಸಾಂಕ್ರಮಿಕ ರೋಗವಲ್ಲ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ವದಂತಿಗಳಿಗೆ ಕಿವಿಗೂಡಬೇಡಿ ಎಂದು ಅವರು ಎಎನ್‍ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕೇರಳದಲ್ಲಿನ ಮಾರಣಾಂತಿಕ ವೈರಾಣುವಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರವಾಸಿಗರಿಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಸಲಹೆ ನೀಡಲಾಗುತ್ತಿದೆ. ಕೋಝಿಕೊಡು, ಮಲ್ಲಪುರಂ, ವೈನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರವಾಸಕ್ಕೆ ತೆರಳುವವರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡುತ್ತಿದ್ದಾರೆ.

ಧಾರ್ಮಿಕ ಪ್ರದೇಶಗಳಲ್ಲಿ ಭಿಕ್ಷಾಟನೆ ನಿಷೇಧ

ಶ್ರೀನಗರ, ಮೇ 24: ಶ್ರೀನಗರದಲ್ಲಿರುವ ಪ್ರಮುಖ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಭಿಕ್ಷಾಟನೆಯನ್ನು ಮೆಹಬೂಮಾ ಮುಫ್ತಿ ಸರ್ಕಾರ ನಿಷೇಧಿಸಿದೆ. ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಪ್ರಕಟವಾಗಿದ್ದು, ಜಮ್ಮು-ಕಾಶ್ಮೀರದ ಸಮ್ಮರ್ ಕ್ಯಾಪಿಟಲ್ ಆಗಿರುವ ಶ್ರೀನಗರ ರಾಜ್ಯದ ಸಮಾಜಿಕ-ಆರ್ಥಿಕ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿದೆ. ಜಿಲ್ಲೆಯನ್ನು ಹೆಚ್ಚು ನಾಗರಿಕ ಸ್ನೇಹಿಯನ್ನಾಗಿಸುವದಕ್ಕಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರ ಭಿಕ್ಷಾಟನೆ ನಿಷೇಧ ಕಾಯ್ದೆ-1960 ರ ಪ್ರಕಾರ ಭಿಕ್ಷಾಟನೆ ಅಪರಾಧವಾಗಿದ್ದು, ಭಿಕ್ಷಾಟನೆಯನ್ನು ನಿಷೇಧಿಸಲು ಕಠಿಣ ಕ್ರಮ ಕೈಗೊಳ್ಳುವದು ಅಗತ್ಯವಾಗಿದೆ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿ ಭಿಕ್ಷಾಟನೆಯಲ್ಲಿ ತೊಡಗುವವರನ್ನು ಬಂಧಿಸಲು ಅವಕಾಶವಿದೆ.

ಗೋಧಿ ಮೇಲಿನ ಆಮದು ಸುಂಕ ಹೆಚ್ಚಳ

ನವದೆಹಲಿ, ಮೇ 24: ದೇಶಿಯ ಬೆಳೆಗಾರರನ್ನು ರಕ್ಷಿಸಲು ಹಾಗೂ ಕಡಿಮೆ ಗುಣಮಟ್ಟದ ಆಮದು ನಿಯಂತ್ರಿಸಲು ಗೋಧಿ ಮೇಲಿನ ಆಮದು ಸುಂಕವನ್ನು ಸರ್ಕಾರ ಶೇ. 20 ರಿಂದ ಶೇ. 30ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಗೋಡಂಬಿ ಮೇಲಿನ ಆಮದು ತೆರಿಗೆಯನ್ನು ಶೇ. 30 ರಿಂದ 100 ರವರೆಗೆ ಹೆಚ್ಚಿಸಿ ಕೇಂದ್ರೀಯ ಅಬಕಾರಿ ಮತ್ತು ತೆರಿಗೆ ಮಂಡಳಿ -ಸಿಬಿಇಸಿ ನಿನ್ನೆ ರಾತ್ರಿ ಆದೇಶ ಹೊರಡಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಡಿಮೆ ಗುಣಮಟ್ಟದ ವಸ್ತುಗಳ ಆಮದಿನ ಭಯ ಹಾಗೂ ದೇಶಿಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಗೋಧಿ ಮೇಲಿನ ಸೇವಾ ಸುಂಕವನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಈ ವರ್ಷದ ಆಮದಿನಲ್ಲಿ ರಷ್ಯಾದ ವಸ್ತುಗಳು ಉತ್ತಮವಾಗಿ ಇವೆ. ವಿದೇಶಗಳಿಂದ ಆಮದು ಮಾಡುವದನ್ನು ಸರ್ಕಾರ ನಿಯಂತ್ರಿಸಲು ಬಯಸಿದ್ದು, ಗೋಧಿ ಮೇಲಿನ ಸೇವಾ ಸುಂಕವನ್ನು ಹೆಚ್ಚಿಸಿದೆ. ಇದರಿಂದಾಗಿ ರೈತರಿಗೆ ಬೆಂಬಲ ಬೆಲೆ ನೀಡಬಹುದು, 2017-18ರ ಬೆಳೆ ವರ್ಷದಲ್ಲಿ ಪ್ರತಿ ಕ್ವಿಂಟಾಲ್‍ಗೆ 1,735 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.

ನಾಳೆ ಕಾಂಗ್ರೆಸ್‍ನಿಂದ “ವಿಶ್ವಾಸಘಾತುಕ” ದಿನಾಚರಣೆ

ನವದೆಹಲಿ, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಲಿರುವ ತಾ. 26 ರಂದು ವಿಶ್ವಾಸಘಾತುಕ ದಿನ’ ಎಂದು ಆಚರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಸರ್ಕಾರವನ್ನು ನಂಬಿದ್ದ ಜನರ ಬೆನ್ನಿಗೆ ಚೂರಿ ಹಾಕಿದೆ. ಇದನ್ನು ಖಂಡಿಸಿ ವಿಶ್ವಾಸಘಾತುಕ ದಿನ ಆಚರಿಸಲಾಗುವದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಮೋದಿ ನೇತೃತ್ವದ ಕೋಮುವಾದಿ ಮತ್ತು ಭ್ರಷ್ಟ ಸರ್ಕಾರದಿಂದ ಹಾಳಾಗುತ್ತಿರುವ ದೇಶವನ್ನು ಕಾಪಾಡಲು ಸಮಾನಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ. ತಾ. 26 ರಂದು ದೇಶದ ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ, ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜೂ. 2 ರಂದು ಮಾನ್ಸೂನ್ ಮಾರುತಗಳು ಪ್ರವೇಶ

ಬೆಂಗಳೂರು, ಮೇ 24: ರಾಜ್ಯಕ್ಕೆ ಮೂರು ದಿನ ಮೊದಲೇ ಅಂದರೆ ಜೂ. 2 ರಂದು ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿವೆ ಎಂದು ಎಂದು ಹವಮಾನ ಇಲಾಖೆ ಹೇಳಿದೆ. ಈ ಹಿಂದೆ ಹವಾಮಾನ ಇಲಾಖೆ ಜೂನ್ 5 ರಂದು ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದವು. ಆದರೆ ಇತ್ತೀಚೆಗಿನ ವರದಿಗಳ ಅನ್ವಯ ಮೂರು ದಿನಗಳ ಮೊದಲೇ ಅಂದರೆ ಜೂನ್ 2 ರಂದೇ ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡಲಿವೆ. ನೈಋತ್ಯ ಮಾನ್ಸೂನ್ ಈ ಬಾರಿ ತಾ. 29 ರಂದು ಅಥವಾ ತಾ. 30 ರಂದು ಕೇರಳ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 2 ರಂದು ಪ್ರವೇಶ ಮಾಡಲಿವೆ. ಅಂತೆಯೇ ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವದರಿಂದ ದಕ್ಷಿಣದ ಒಳನಾಡಿನಲ್ಲಿ ಮತ್ತೆ ಮಳೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾ. 26 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಹೇಳಿದೆ.