ಕೂಡಿಗೆ, ಮೇ 24 : ಸಮೀಪದ ಐಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಡವನಾಡು ಸಮೀಪವಿರುವ ಸೂಳೆಬಾವಿ ಗಿರಿಜನರ ಹಾಡಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ದಿಢೀರ್ ಭೇಟಿ ನೀಡಿ, ಅಲ್ಲಿನ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
2015-16, 2016-17ನೇ ಸಾಲಿನಲ್ಲಿ ತಾಲೂಕು ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ 8 ಲಕ್ಷ ರೂ ವೆಚ್ಚದ ಕಾಮಗಾರಿ, 17 ಲಕ್ಷ ರೂ ವೆಚ್ಚದ ರಸ್ತೆ ಮತ್ತು ಸೇತುವೆ ಕಾಮಗಾರಿ ನಡೆದಿದ್ದು, ಈ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಸೋಮವಾರಪೇಟೆ ತಾಲೂಕಿನಾದ್ಯಂತ ಇರುವ ಗಿರಿಜನರ ಹಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವದರಲ್ಲಿ ಯಾವದೇ ನಿರ್ಲಕ್ಷ್ಯ ತೋರದೆ, ಶೀಘ್ರವಾಗಿ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ತಾಲೂಕು ದಂಡಾಧಿಕಾರಿ ವೀರೇಂದ್ರ ಬಾಡ್ಕರ್, ಕಂದಾಯ ನಿರೀಕ್ಷಕ ಮಧುಸೂಧನ್, ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಸಹಾಯಕ ಇಂಜಿನಿಯರ್ ಕೀರ್ತನ್‍ಕುಮಾರ್, ವೀರೇಂದ್ರ, ಕೂಡಿಗೆ ಗ್ರಾಮಲೆಕ್ಕಿಗ ಗೌತಮ್, ಸಚಿನ್ ಹಾಗೂ ಹಾಡಿಯ ನಿವಾಸಿಗಳು ಇದ್ದರು.