ಮಡಿಕೇರಿ, ಮೇ 24: ಲಕ್ಷಾಂತರ ನೌಕರರು ಹಾಗೂ ಅವರ ಕುಟುಂಬಗಳ ಸಮಸ್ಯೆಗಳಿಗೆ ತನ್ನ ಅನುಭವದ ಆಧಾರದಲ್ಲಿ ಪರಿಹಾರ ಕಂಡು ಹಿಡಿಯುವ ಸ್ಪಷ್ಟ ಗುರಿ ಹಾಗೂ ನಿಖರ ನಿಲುವಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಆಯನೂರು ಮಂಜುನಾಥ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವ ಅನುದಾನ ಪ್ರಕ್ರಿಯೆ, ಶಿಕ್ಷಕರ ವರ್ಗಾವಣೆ, ನೇಮಕಾತಿ ಗೊಂದಲ, ಇಲಾಖೆಯಲ್ಲಿನ ಭ್ರಷ್ಟಾಚಾರ ಇನ್ನಿತ್ಯಾದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ದಿಸೆಯಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ, ಶಿಕ್ಷಕರ ಸಮಸ್ಯೆಗಳ ಬಗ್ಗೆ ತನಗೆ ಅರಿವಿದ್ದು, ಈ ಬಗ್ಗೆ ಹೋರಾಟ ಮಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಮತದಾರರು ತನಗೆ ಆಶೀರ್ವಾದ ಮಾಡುವಂತಾಗಬೇಕೆಂದು ಮನವಿ ಮಾಡಿದರು.
1994ರಲ್ಲಿ ಶಾಸಕರಾಗಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸಿದ್ದಕ್ಕಾಗಿ ಉತ್ತಮ ಸಂಸದೀಯ ಪಟು ಎಂಬ ಪ್ರಶಂಸೆಗೆ ಪಾತ್ರನಾಗಿದ್ದ ತಾನು ಪ್ರಸ್ತುತವೂ ಕಾರ್ಮಿಕರಿಗಾಗಿ ಶಕ್ತಿ ಮೀರಿ ಹೋರಾಡಲು ಸಿದ್ಧನಿದ್ದೇನೆ. ಮತದಾರರು ಅವಕಾಶ ಕಲ್ಪಿಸಬೇಕೆಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ರಾಬಿನ್ ದೇವಯ್ಯ, ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ದತ್ತಾತ್ರೇಯ ಇದ್ದರು.