ಹೆಬ್ಬಾಲೆ, ಮೇ 23 : ಇಲ್ಲಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲೆಹೊಲ ಪ್ರದೇಶದಲ್ಲಿರುವ ಶ್ರೀಮಸಣಿಕಮ್ಮ ದೇವಿಯ 8ನೇ ವರ್ಷದ ವಾರ್ಷಿಕ ಪೂಜಾಮಹೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ 6 ಗಂಟೆಗೆ ಪವಿತ್ರ ಕಾವೇರಿ ನದಿಯಿಂದ ಗಂಗೆ ಪೂಜೆ ನೆರವೇರಿಸಿ ಪೂರ್ಣಕುಂಭ ಕಳಶದೊಂದಿಗೆ ಗಂಗೆಯನ್ನು ತಂದು ದೇವಿಗೆ ಅಭಿಷೇಕ ಮಾಡಲಾಯಿತು. ರಾತ್ರಿ ಹರಿಸಾಸಿವೆ ನಡೆಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾಮಹೋತ್ಸವ ಅಂಗವಾಗಿ ದೇವಿಗೆ ವಿವಿಧ ಪುಷ್ಪಗಳಿಂದ ಶೃಂಗಾರ ಮಾಡಲಾಯಿತು.
ಬೆಳಿಗ್ಗೆಯಿಂದಲೇ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು. ನಂತರ ಬಲಿ ಪೂಜೆ ನಡೆಯಿತು.
ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಜಿ.ಗಣೇಶ್, ಕಾರ್ಯದರ್ಶಿ ಎಚ್.ಸಿ.ಹರೀಶ್, ಸಮಿತಿ ಸದಸ್ಯರಾದ ಎಚ್.ಜೆ.ರಾಜಣ್ಣ, ಎಚ್.ಕೆ.ಸುರೇಶ್,ಎಚ್.ಎಂ.ವಿಶ್ವನಾಥ್, ಎ. ಅರುಣ್ ಕುಮಾರ್, ವಿಜಯ, ಗಣೇಶ್, ಎಚ್.ಜೆ. ಶಿವಣ್ಣ, ನಾರಾಯಣ, ಲಕ್ಕಯ್ಯ,ಎಚ್.ಎಂ.ರಮೇಶ್, ಎಚ್.ಕೆ.ರವೀಂದ್ರ ಮತ್ತಿತರರು ಹಾಜರಿದ್ದರು.